ಒಂದೂವರೆ ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ಬಗೆಗೆ ವರದಿಗಳು ಬರುತ್ತಲೇ ಇವೆ. ಈಚೆಗೆ 'ರಷ್ಯಾ ಸೇನೆ ವಿರುದ್ಧ ತಿರುಗಿಬಿದ್ದ ವ್ಯಾಗ್ನರ್ ಗುಂಪು' ಎಂಬ ವರದಿ ಒಂದು ವಿಕ್ಷಿಪ್ತ ಬೆಳವಣಿಗೆಯತ್ತ ಬೊಟ್ಟು ಮಾಡುತ್ತಿತ್ತು.
ಕಳೆದ ವರ್ಷ ಫೆಬ್ರುವರಿಯಲ್ಲಿ ರಷ್ಯಾದ ಆಕ್ರಮಣ ಆರಂಭವಾದಾಗಲೇ ಈ ದಾಳಿಯ ಹಿನ್ನೆಲೆ ಮತ್ತು ಸಂಭಾವ್ಯ ಕಾರಣಗಳ ಬಗ್ಗೆ ಪರಿಣತರ ವಿವರಣೆಗಳನ್ನು ನೋಡಿದ್ದೆವು. ನಂತರದಲ್ಲಿ ಯುದ್ಧ ಪಡೆಯುತ್ತಿರುವ ತಿರುವುಗಳನ್ನೂ ನೋಡಿದ್ದೇವೆ.
ಯುದ್ಧದ ಆರಂಭದ ದಿನಗಳಲ್ಲಿ ಬಂದಿದ್ದ ಸುಧೀಂದ್ರ ಬುಧ್ಯ ಅವರ 'ದಿಗ್ಗಜರ ಹಗೆ, ಉಕ್ರೇನ್ ಬೇಗೆ' ಎಂಬ ಲೇಖನದಲ್ಲಿ ರಷ್ಯಾದ ಉಕ್ರೇನ್ ಯುದ್ಧಕ್ಕೆ ನ್ಯಾಟೋ ದ ವಿಸ್ತರಣಾ ದಾಹವೇ ಪ್ರಮುಖ ಕಾರಣವೆಂದೂ, ಹಾಗೆಯೇ ತನ್ನ ಶಸ್ತ್ರ ಉದ್ಯಮವನ್ನು ವೃದ್ಧಿಸಿಕೊಳ್ಳಲು ಮತ್ತು ಐರೋಪ್ಯ ರಾಷ್ಟ್ರಗಳನ್ನು ತನ್ನ ಪರಿಧಿಯಲ್ಲಿರಿಸಿಕೊಳ್ಳಲು ಅಮೆರಿಕೆಗೆ ಈ ಯುದ್ಧ ಸಹಕಾರಿಯೆಂದೂ ವಾದಿಸಲಾಗಿತ್ತು. ಅದು ನಿಜವಿರಬಹುದು. ಅದೇ ಕಾರಣವಲ್ಲದಿರಲೂಬಹುದು. ಅದೇನೇ ಇರಲಿ, ಎರಡನೇ ಮಹಾಯುದ್ಧದ ನಂತರದ ಉಕ್ರೇನ್ ನ ರಾಜಕೀಯ ಇತಿಹಾಸದ ಬಗ್ಗೆ ಮತ್ತು ರಷ್ಯಾದ ಈ ಆಕ್ರಮಣದ ನಿಕಟಪೂರ್ವ ಹಿನ್ನೆಲೆಯ ಬಗ್ಗೆ ತಿಳಿಯಲು ಈ ಲೇಖನ ಉಪಯುಕ್ತವಾದುದಾಗಿದೆ.
ಇನ್ನೂ ಕೆಲವರ ಪ್ರಕಾರ ಪ್ರಚೋದನೆಯಿಲ್ಲದೆ ಮಾಡಿದ ರಷ್ಯಾದ ದಾಳಿಯ ಹಿಂದೆ ಇದ್ದದ್ದು ಪುಟಿನ್ ನ ಪುಂಡಾಟಿಕೆಯ ಮನೋಭಾವವೊಂದೇ.
ಒಂದೂವರೆ ವರ್ಷದಿಂದ ಯುದ್ಧದಲ್ಲಿ ರಷ್ಯಾ ಪಡೆಗಳ ಭಾಗವಾಗಿದ್ದ ಖಾಸಗಿ ಮಿಲಿಟರಿ ಗುಂಪಾದ 'ವ್ಯಾಗ್ನರ್' ಈಗ ರಷ್ಯಾದ ಸೇನೆಯ ವಿರುದ್ಧ ತಿರುಗಿ ಬಿದ್ದಿದ್ದು, ನಂತರದ ಬೆಳವಣಿಗೆಯಲ್ಲಿ ಈ ಗುಂಪಿನ ನಾಯಕ ಪ್ರಿಗೋಷಿನ್ ಪುಟಿನ್ ಜೊತೆ ರಾಜಿಯಾಗಿ ಬೆಲಾರೂಸ್ ನಲ್ಲಿ ಆಶ್ರಯ ಪಡೆದು ವ್ಯಾಗ್ನರ್ ದಾಳಿಯನ್ನು ಮೊಟಕುಗೊಳಿಸಿದ್ದು, ಇದೆಲ್ಲ ನೋಡಿದರೆ ವಿಶ್ವದ ಶಕ್ತ ರಾಷ್ಟ್ರಗಳಲ್ಲಿ ಗುರುತಿಸಿಕೊಂಡಿರುವ ರಾಷ್ಟ್ರವೊಂದು ವರ್ತಿಸುವ ಸರಿಯಾದ ರೀತಿ ಇದಲ್ಲ. ಅತ್ಯಂತ ಅಮಾನವೀಯ ಯುದ್ಧ ತಂತ್ರಗಳನ್ನು ಪ್ರಯೋಗಿಸುವ ವ್ಯಾಗ್ನರ್ ನಂತಹ ಖಾಸಗಿ ಸೇನೆಯನ್ನು ಬಳಸುವುದು, ತನ್ನ ಅಧಿಕಾರ ಭದ್ರತೆಯೊಂದೇ ಗುರಿಯಾಗಿಸಿಕೊಂಡು ಅನಗತ್ಯ ಯುದ್ಧಗಳ ಮೂಲಕ ತನ್ನ ಸೇನೆ ಮತ್ತು ಜನರನ್ನು ಅಪಾಯಗಳಿಗೆ ದೂಡುವುದು ಅತ್ಯಂತ ಬೇಜವಾಬ್ದಾರಿತನದ ವರ್ತನೆ.
ನಾನೇನೂ ಇತಿಹಾಸತಜ್ಞನಲ್ಲದೇ ಇದ್ದರೂ ನಾನು ಓದಿರುವ ಪುಸ್ತಕಗಳ, ಅದರಲ್ಲೂ ಸಾಹಿತ್ಯದ ಆಧಾರದಲ್ಲಿ ತಿಳಿದಿರುವುದೆಂದರೆ-, ಧೂರ್ತರು, ಅಧಿಕಾರ ಲಾಲಸಿಗಳೂ ಕೆಲವೊಮ್ಮೆ ಹಿಂಸೆಯಿಂದ ಮತ್ತೆ ಇನ್ನು ಕೆಲವೊಮ್ಮೆ ಜನಾದೇಶದಿಂದಲೇ ಅಧಿಕಾರ ಹಿಡಿದರೂ ಅವರು ಅನೇಕ ಪಲ್ಲಟಗಳಿಗೆ ಕಾರಣರಾಗುವುದೂ, ದೊಡ್ಡ ಸಂಖ್ಯೆಯಲ್ಲಿ ನಿಷ್ಪಾಪಿ ಜನರ ನಾಶಕ್ಕೆ ಕಾರಣರಾಗುವುದೂ ನಡೆಯುತ್ತಲೇ ಬಂದಿದೆ.