2026 ರ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಯು ಉತ್ತರ ಅಮೇರಿಕಾ ದಲ್ಲಿ ಇನ್ನೇನು ಆರಂಭವಾಗುವುದರಲ್ಲಿದೆ. ಇದು ವಿಶ್ವದ ಅತಿದೊಡ್ಡ ಕ್ರೀಡಾಕೂಟವಾಗಿದ್ದು ಇದೀಗ 48 ತಂಡಗಳ ಭಾಗವಹಿಸುವಿಕೆಯಿಂದ ಒಂದು ಭಾರಿ ಬದಲಾವಣೆಗೂ ಮುನ್ನುಡಿಯಾಗಲಿದೆ. ಈ ಐತಿಹಾಸಿಕ ಆವೃತ್ತಿಗಾಗಿ ನಾವು ನಿರೀಕ್ಷೆಯಲ್ಲಿರುವಾಗ, ಫುಟ್ ಬಾಲ್ ಎಂಬ ಈ ಸುಂದರ ಕ್ರೀಡೆ (the beautiful game) ಯನ್ನು ಈ ಮಟ್ಟಕ್ಕೆ ತರಲು ನೆರವಾದ ಕಳೆದ ಸುಮಾರು ನೂರು ವರ್ಷಗಳ (ಮೊದಲ ವಿಶ್ವಕಪ್ ಪಂದ್ಯಾವಳಿ 1930ರಲ್ಲಿ) ಹಲವು ಯುಗಗಳು ಮತ್ತು ಐಕಾನ್ಗಳನ್ನು ಹಿಂತಿರುಗಿ ನೋಡಬಹುದು. ಮತ್ತು ಈ ವರ್ಷದ ಪಂದ್ಯಾವಳಿಯಿಂದ ಏನನ್ನು ನಿರೀಕ್ಷಿಸಬಹುದು ಎಂದು ಗಮನಿಸಬಹುದು.
FIFA ವಿಶ್ವ ಕಪ್ ವಿಭಿನ್ನ ಹಂತಗಳ ಮೂಲಕ ವಿಕಸನಗೊಂಡಿದೆ, ಪ್ರತಿಯೊಂದೂ ವಿಶಿಷ್ಟವಾದ ತಂತ್ರದ ಬದಲಾವಣೆಗಳು ಮತ್ತು ಜಾಗತಿಕ ಬೆಳವಣಿಗೆಯಿಂದ ಗುರುತಿಸಲ್ಪಟ್ಟಿದೆ:
ಆರಂಭಿಕ ವರ್ಷಗಳು (1930-1950): ಪಂದ್ಯಾವಳಿಯು 1930 ರಲ್ಲಿ ಉರುಗ್ವೆಯಲ್ಲಿ ಪ್ರಾರಂಭವಾಯಿತು. ಇಂತಹದ್ದೊಂದು ಪಂದ್ಯಾವಳಿಯ ಯಶಸ್ಸನ ಬಗೆಗೆ ಸಹಜವಾಗಿಯೇ ಆರಂಭಿಕ ಸಂದೇಹಗಳಿದ್ದವು ಮತ್ತು ಎರಡನೇ ಮಹಾಯುದ್ಧದಿಂದ 12 ವರ್ಷಗಳ ವಿರಾಮ ಸಹ ಉಂಟಾಯಿತು. ಈ ಯುಗದಲ್ಲಿ ಇಟಲಿ ಪ್ರಾಬಲ್ಯ ಹೊಂದಿತ್ತು, ಇಟಲಿಯು 1934 ಮತ್ತು 1938 ರಲ್ಲಿ ಮ್ಯಾನೇಜರ್ ವಿಟ್ಟೋರಿಯೊ ಪೊಝೊ ಅಡಿಯಲ್ಲಿ ಬ್ಯಾಕ್-ಟು-ಬ್ಯಾಕ್ ಪ್ರಶಸ್ತಿಗಳನ್ನು ಪಡೆಯಿತು.
ತಂತ್ರಗಾರಿಕೆಯ ಕ್ರಾಂತಿಗಳು (1954-1974): ಈ ಅವಧಿಯು ಫುಟ್ ಬಾಲ್ ನ ಆಧುನಿಕ ತಂತ್ರಗಾರಿಕೆಯ ಆರಂಭವನ್ನು ಕಂಡಿತು. ಹಂಗೇರಿ 1954 ರಲ್ಲಿ “ಫಾಲ್ಸ್ 9 (ಹೈಬ್ರಿಡ್ ಸ್ಟ್ರೈಕರ್)” ಅನ್ನು ಪರಿಚಯಿಸಿತು, ಬ್ರೆಜಿಲ್ “Jogo Bonito” (ಸುಂದರ ಆಟ) ಕಾನ್ಸೆಪ್ಟ್ ನಿಂದ ಜಗತ್ತನ್ನು ಆಕರ್ಷಿಸಿತು, ನಾಲ್ಕು ಆವೃತ್ತಿಗಳಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದಿತು. 1974 ರಲ್ಲಿ ನೆದರ್ಲ್ಯಾಂಡ್ಸ್ ನೇತೃತ್ವದ “ಟೋಟಲ್ ಫುಟ್ಬಾಲ್” ಈ ಯುಗವನ್ನು ಉತ್ತುಂಗಕ್ಕೇರಿಸಿತು.
ಜಾಗತೀಕರಣ (1982-1998): ಪಂದ್ಯಾವಳಿಯು ಮೊದಲು 1982 ರಲ್ಲಿ 24 ತಂಡಗಳಿಗೆ ಮತ್ತು ನಂತರ 1998 ರಲ್ಲಿ 32 ತಂಡಗಳಿಗೆ ವಿಸ್ತರಿಸಿತು, ಸಣ್ಣ ರಾಷ್ಟ್ರಗಳು ತಮ್ಮ ಛಾಪು ಮೂಡಿಸಲು ಅವಕಾಶ ಮಾಡಿಕೊಟ್ಟಿತು. ಮೊದಲ ಆಫ್ರಿಕನ್ ಸೂಪರ್ಸ್ಟಾರ್ ರೋಜರ್ ಮಿಲ್ಲಾ ಸಹ ಈ ಹಂತದಲ್ಲೇ ಆಡಿದ್ದು. ಅವರು ಕ್ಯಾಮರೂನ್ ಅನ್ನು 1990 ರಲ್ಲಿ ಐತಿಹಾಸಿಕ ಕ್ವಾರ್ಟರ್ಫೈನಲ್ ವರೆಗೆ ಕೊಂಡೊಯ್ದಿದ್ದರು.
( ಇಟಲಿಯಲ್ಲಿ ನಡೆದ 1982 ರ ವರ್ಲ್ಡ್ ಕಪ್, ಫುಟ್ಬಾಲ್ ಕ್ರೀಡೆಯತ್ತ ಭಾರತದಲ್ಲಿ ಬಹಳ ಜನರನ್ನು ಆಕರ್ಷಿಸಿದ ಪಂದ್ಯಾವಳಿ ಎಂದರೆ ತಪ್ಪಾಗಲಾರದು. ಭಾರತದಲ್ಲಿ ಟಿವಿ ಯಲ್ಲಿ ಪ್ರಸಾರವಾದ ಮೊದಲ ವರ್ಲ್ಡ್ ಕಪ್ ಅದಾಗಿತ್ತು. ನಾನೂ ಸಹ ಅಲ್ಲಿಂದ ಆರಂಭಿಸಿ ಅಲ್ಲಿಂದ ಮುಂದಿನ ಎಲ್ಲಾ ವರ್ಲ್ಡ್ ಕಪ್ಗಳನ್ನು ಆಸಕ್ತಿಯಿಂದ ಗಮನಿಸಿದ್ದೇನೆ. )
ದಿ ಹೈಪರ್-ಮಾಡರ್ನ್ ಎರಾ (2002-ಪ್ರಸ್ತುತ): ಫುಟ್ಬಾಲ್ ಹೆಚ್ಚು ಹೆಚ್ಚು ಡೇಟಾ-ಚಾಲಿತ ಮತ್ತು ತಂತ್ರಜ್ಞಾನ-ಅವಲಂಬಿತವಾಗಿ ಬದಲಾಗಿದೆ. ಇತ್ತೀಚೆಗೆ ಜಾಗತಿಕ ಹಂತಕ್ಕೆ VAR (video assistant referee) ಅನ್ನು ಪರಿಚಯಿಸುತ್ತಿದೆ. ಈ ಯುಗದಲ್ಲಿ ಪಂದ್ಯಾವಳಿಯು ಹೊಸ ಗಡಿಗಳನ್ನು ತಲುಪಿದೆ, ಏಷ್ಯಾ (2002) ಮತ್ತು ಆಫ್ರಿಕಾ (2010) ದಲ್ಲಿ ಮೊದಲ ಆವೃತ್ತಿಗಳು ನಡೆದದ್ದೂ ಈ ಹಂತದಲ್ಲೇ.
ಇದುವರೆಗೂ ವಿಶ್ವಕಪ್ ನಲ್ಲಿ ನೂರಾರು ಆಟಗಾರರು ಸ್ಪರ್ಧಿಸಿದ್ದಾರೆ. ಅದರಲ್ಲಿ ಕೆಲವರು ಐಕಾನ್ ಗಳೆಂದು ಗುರುತಿಸಲ್ಪಡುತ್ತಾರೆ. ಇಂತಹವರಲ್ಲಿ ಪ್ರಮುಖರು--
ಪೀಲೆ: ಮೂರು ವಿಶ್ವಕಪ್ ಪ್ರಶಸ್ತಿಗಳನ್ನು ಹೊಂದಿರುವ ಏಕೈಕ ಆಟಗಾರ, ಪೀಲೆ ಫೈನಲ್ನಲ್ಲಿ (1958) ಅತ್ಯಂತ ಕಿರಿಯ ಸ್ಕೋರರ್ ಆಗಿ ಉಳಿದಿದ್ದಾರೆ ಮತ್ತು ಪಂದ್ಯಾವಳಿಯ ಇತಿಹಾಸದೊಂದಿಗೆ ಅತ್ಯಂತ ಹೆಚ್ಚು ಗುರ್ತಿಸಲ್ಪಡುವ ಆಟಗಾರನಾಗಿದ್ದಾರೆ.
ಡಿಯಾಗೋ ಮರಡೋನಾ: 1986 ರಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ “ಹ್ಯಾಂಡ್ ಆಫ್ ಗಾಡ್” ಗೋಲು ಮತ್ತು ಅದೇ ಪಂದ್ಯದಲ್ಲಿ ಗಳಿಸಿದ “ಶತಮಾನದ ಗೋಲು” ಎಂದು ಹಲವರು ಪರಿಗಣಿಸುವ ಎರಡನೇ ಗೋಲು ಎರಡಕ್ಕೂ ಪ್ರಸಿದ್ಧನಾದ ಮರಡೋನಾ ಏಕಾಂಗಿಯಾಗಿ ಆ ಟೂರ್ನಿಯಲ್ಲಿ ಅರ್ಜೆಂಟೀನಾವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದರು.
(ಆ ಪಂದ್ಯವನ್ನು ಟಿವಿಯಲ್ಲಿ ಲೈವ್ ನೋಡಿದ್ದು ನೆನಪಿದೆ ಮತ್ತು ಆ ಎರಡನೇ ಗೋಲಿ ನಲ್ಲಿ ಮರಡೋನಾ ಮೈದಾನದ ಮಧ್ಯದಿಂದ ಗೋಲಿನವರೆಗೂ ಎಲ್ಲ ಎದುರಾಳಿ ಆಟಗಾರರನ್ನು ವಂಚಿಸಿ ಚೆಂಡನ್ನು ಕೊಂಡೊಯ್ದ ರೀತಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.)
ಫ್ರಾಂಜ್ ಬೆಕೆನ್ಬೌರ್: ಕೈಸರ್ ಎಂದು ಕರೆಯಲ್ಪಡುವ ಇವರು ಆಟಗಾರನಾಗಿ (1974) ಮತ್ತು ಮ್ಯಾನೇಜರ್ ಆಗಿ (1990) ಎರಡೂ ರೋಲ್ ಗಳಲ್ಲಿ ವಿಶ್ವಕಪ್ ಗೆದ್ದ ಮೂವರಲ್ಲಿ ಒಬ್ಬರು.
ಜಿನೆಡಿನ್ ಜಿಡಾನ್ : ಫ್ರಾನ್ಸ್ನ ಚೊಚ್ಚಲ 1998 ಪ್ರಶಸ್ತಿಯ ನಾಯಕ, ಅವರ ವೃತ್ತಿಜೀವನವು 2006 ರ ಫೈನಲ್ನಲ್ಲಿ ಹೆಡ್ಬಟ್ನೊಂದಿಗೆ ನಾಟಕೀಯ ಶೈಲಿಯಲ್ಲಿ ಕೊನೆಗೊಂಡಿತು. ಆದರೂ ಅವರ ಪ್ಲೇಮೇಕಿಂಗ್ ಪರಂಪರೆ ನಿರ್ವಿವಾದವಾಗಿ ಉಳಿದಿದೆ.
(ಜಿಡಾನ್ ಕ್ರೀಡಾಂಗಣದಲ್ಲಿ ಸಂಚರಿಸುತ್ತಿದ್ದ ರೀತಿ ನಿಜಕ್ಕೂ ಅನುಪಮ. ನಾನು ನೋಡಿರುವ ಫುಟ್ ಬಾಲ್ ಆಟಗಾರರಲ್ಲೇ ಜಿಡಾನ್ ರ ಚಲನೆ, ಚೆಂಡಿನ ಹತೋಟಿ, ಪಾಸಿಂಗ್ ಎಲ್ಲವೂ ಅತ್ಯಾಕರ್ಷಕ. )
ರೊನಾಲ್ಡೊ ನಜಾರಿಯೊ: 1998 ರಲ್ಲಿ ಹೃದಯಾಘಾತದ ನಂತರ, ಅವರು 2002 ರಲ್ಲಿ ತಮಗಂಟಿದ್ದ ಅನಾರೋಗ್ಯ ದುರದೃಷ್ಟಗಳಿಂದ ಬಿಡುಗಡೆ ಕಂಡುಕೊಂಡರು. ಬ್ರೆಜಿಲ್ ಐದನೇ ಪ್ರಶಸ್ತಿಯನ್ನು ಪಡೆಯಲು ಫೈನಲ್ನಲ್ಲಿ ಎರಡು ಗೋಲುಗಳೂ ಸೇರಿದಂತೆ ಎಂಟು ಗೋಲುಗಳನ್ನು ಗಳಿಸಿದರು.
ಲಿಯೋನೆಲ್ ಮೆಸ್ಸಿ: 16 ವರ್ಷಗಳ ಕಾಯುವಿಕೆಯ ನಂತರ, ಮೆಸ್ಸಿ ಅರ್ಜೆಂಟೀನಾವನ್ನು 2022 ನಲ್ಲಿ ಗೆಲುವಿನತ್ತ ಮುನ್ನಡೆಸುವ ಮೂಲಕ ದಂತಕಥೆಯಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರು. ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಗಳಿಸಿದರು.
2026 ರಲ್ಲಿ ಏನನ್ನು ನಿರೀಕ್ಷಿಸಬಹುದು
ಮುಂಬರುವ 2026 ರ ಆವೃತ್ತಿಯು ಇದುವರೆಗೆ ನಡೆದ ಅತಿದೊಡ್ಡ ಮತ್ತು ಅತ್ಯಂತ ಸಂಕೀರ್ಣವಾದ ಪಂದ್ಯಾವಳಿಯಾಗಿದೆ:
ಅಭೂತಪೂರ್ವ ಸ್ಕೇಲ್: ಮೊದಲ ಬಾರಿಗೆ, ಪಂದ್ಯಾವಳಿಯನ್ನು ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಮೆಕ್ಸಿಕೊ ಹೀಗೆ ಮೂರು ದೇಶಗಳಲ್ಲಿ ಆಯೋಜಿಸಲಾಗುತ್ತದೆ. ಇದು 48 ತಂಡಗಳ ವಿಸ್ತೃತ ಸ್ವರೂಪವನ್ನು ಹೊಂದಿರುತ್ತದೆ ( ಮತ್ತು 104 ಪಂದ್ಯಗಳನ್ನು!) .
ಐತಿಹಾಸಿಕ ಪ್ರಥಮಗಳು: ಕ್ರೀಡೆಯ ಮುಂದುವರಿದ ಜಾಗತಿಕ ವ್ಯಾಪ್ತಿಯನ್ನು ಪ್ರತಿಬಿಂಬಿಸುವಂತೆ ಕ್ಯೂರಸಾ (ಎರಡು ಲಕ್ಷಗಳಿಗೂ ಕಡಿಮೆ ಜನಸಂಖ್ಯೆ ) ನಂತಹ ಮೊದಲ ಬಾರಿ ಭಾಗವಹಿಸುವ ತಂಡಗಳ ಆಗಮನವನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ದಿ ಫೈನಲ್ ಬೋ: ಐಕಾನ್ಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ವೇದಿಕೆಯಲ್ಲಿ ತಮ್ಮ ಅಂತಿಮ ಪ್ರದರ್ಶನವನ್ನು ನೀಡಲಿದ್ದಾರೆ.
1930 ರಲ್ಲಿ ಉರುಗ್ವೆಗೆ ತಂಡಗಳನ್ನು ಸಾಗಿಸಿದ ಕ್ರೂಸ್ ಹಡಗಿನಿಂದ 2026 ರ ಹೈಟೆಕ್ ಸ್ಟೇಡಿಯಂಗಳವರೆಗೆ, ವಿಶ್ವಕಪ್ ಫುಟ್ಬಾಲ್ ಎಂಬ ಕಲೆ, ಪ್ರತಿಭೆ, ದೈಹಿಕ ಸಾಮರ್ಥ್ಯ, ಮನೋದಾರ್ಢ್ಯ ಎಲ್ಲದರ ಪರೀಕ್ಷೆಯ ಅಂತಿಮ ಕ್ರೀಡಾ ನಾಟಕ ಮುಂದುವರಿಯುತ್ತಲೇ ಇದೆ.
