ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಗಳ ಪ್ರಮುಖರಲ್ಲಿ ಒಬ್ಬರಾಗಿದ್ದ ಹಾಗೂ ‘ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್’ನ (AISA) ರಾಷ್ಟ್ರೀಯ ಅಧ್ಯಕ್ಷೆಯಾಗಿರುವ ನೇಹಾ ಬೋರಾ ಅವರೊಡನೆ ‘ಇನ್ ಫೋಕಸ್’ ಪಾಡ್ ಕಾಸ್ಟ್ ನಲ್ಲಿ ಜಿ ಸಂಪತ್ ಅವರು ನಡೆಸಿದ ಸಂವಾದವನ್ನು ಕೇಳುತ್ತಿದ್ದೆ.
ಪ್ರತಿಭಟನೆಯ ಸಂದರ್ಭದಲ್ಲಿ ಹಲವು ದಿನಗಳ ಕಾಲ ಉಪವಾಸ ನಡೆಸಿದ ನೇಹಾರನ್ನು ನೀವು ಶಿಕ್ಷಣ ಮಂತ್ರಿಗಳ ಅತ್ಮಸಾಕ್ಷಿಗೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಿರಾ ಎಂಬ ಪ್ರಶ್ನೆಗೆ ನೇಹಾ ನೀಡಿದ ಉತ್ತರ ಮಾರ್ಮಿಕವಾಗಿತ್ತು. ಸರಕಾರದ ಆತ್ಮಸಾಕ್ಷಿಗೆ ಮನವಿ ಮಾಡುವ ಯೋಚನೆಯೇ ತಮಗಿರಲಿಲ್ಲವೆಂದೂ ಅಲ್ಲಿ ಆತ್ಮಸಾಕ್ಷಿಯಿದೆಯೆಂದು ತಮಗೆ ಅನಿಸಿಯೂ ಇರಲಿಲ್ಲವೆಂದೂ, ತಮ್ಮ ಮನವಿ ಏನಿದ್ದರೂ ಜನರ ಆತ್ಮಸಾಕ್ಷಿಗೆ ಆಗಿತ್ತೆಂದೂ ಹೇಳುತ್ತಾರೆ. ಟೆಲಿವಿಶನ್ ಪರದೆಗಳಿಂದ ಮತ್ತು ಕೆಂಪು ಕೋಟೆಯಿಂದ ಮಹಿಳಾ ಸಬಲೀಕರಣದ ಬಗೆಗೆ ಹೇಳುವುದನ್ನು ವೀಕ್ಷಿಸುವ, ಹಾಗೆಯೇ ‘ ಪರೀಕ್ಷಾ ಪೆ ಚರ್ಚಾ’ ನಡೆಸಿ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯಿರುವಂತೆ ಮಾತನಾಡುವುದನ್ನು ಕೇಳುವ ಜನರಲ್ಲಿ ತಮ್ಮ ಮನವಿ ಆಗಿತ್ತೆಂದು ಹೇಳುತ್ತಾರೆ. ಮತ್ತು ಈ ಮನವಿಯು ‘ನೋಡಿ ನಾವು ನಿಮಗಾಗಿ ತ್ಯಾಗ ಮಾಡುತ್ತಿದ್ದೇವೆ’ ಎಂಬರ್ಥದಲ್ಲಿ ಅಲ್ಲವಾಗಿತ್ತು. ಬದಲಿಗೆ, ‘ತೋರುಗಾಣಿಕೆಯ ಕಾಳಜಿ’ ಯನ್ನಷ್ಟೇ ಹೊಂದಿರುವ ಈ ಸರ್ಕಾರ ಇಂದು ನಮ್ಮನ್ನು ನಿರ್ಲಕ್ಷಿಸುತ್ತಿರುವಂತೆ ನಾಳೆ ನಿಮ್ಮನ್ನೂ ನಿರ್ಲಕ್ಷಿಸುತ್ತದೆ ಎಂದು ತೋರಿಸುವುದಾಗಿತ್ತು ಎಂದು ಹೇಳುತ್ತಾರೆ.
ಬೋರಾ ಅವರ ಈ ಮಾತುಗಳನ್ನು ಕೇಳುವಾಗ ನನಗೆ ನೆನಪಾಗಿದ್ದು ಕೆಲವು ವರ್ಷಗಳ ಹಿಂದೆ ಓದಿದ್ದ ಮಿಲನ್ ಕುಂದೆರಾ ಬರೆದ ‘ ದಿ ಅನ್ ಬೇರಬಲ್ ಲೈಟ್ ನೆಸ್ ಆಫ್ ಬೀಯಿಂಗ್’ ಕಾದಂಬರಿ. ಅದರಲ್ಲಿ ಜರ್ಮನ್ ಮೂಲದ ಇಂಗ್ಲಿಷ್ ಪದವೊಂದಿದೆ- ‘ಕಿಚ್’ kitsch ಎಂದು (ಗೂಗಲ್ ನಲ್ಲಿ ಇದರ ಕನ್ನಡ ಅನುವಾದ ‘ಖಾಲಿ ಬೆಡಗು’ ಎಂದಿದೆ). ಇದರ ಪರಿಕಲ್ಪನೆಯನ್ನು ಕುಂದೆರಾ ಅದ್ಭುತವಾಗಿ ಅನ್ವೇಷಿಸಿದ್ದಾರೆ. ಇದರ ಬಗೆಗೆ ಒಂದು ವಿವರಣಾತ್ಮಕ ಪ್ರಬಂಧ Medium ನಲ್ಲಿದೆ.
ಕುಂದೇರ ಅವರ ದೃಷ್ಟಿಯಲ್ಲಿ, ಕಿಚ್ ಕೇವಲ ಕೆಟ್ಟ ಅಭಿರುಚಿಯಲ್ಲ; ಇದು shit ನ ನಿರಾಕರಣೆ ಯನ್ನು ಬಯಸುವ ಸೌಂದರ್ಯದ ಆದರ್ಶ. ಇಲ್ಲಿ shit ಎನ್ನುವುದು ಮಾನವ ಅಸ್ತಿತ್ವದಲ್ಲಿ ಸ್ವೀಕಾರವಲ್ಲದ, ಗೊಂದಲಮಯವಾದ, ಅಥವಾ ವಿರೋಧಾತ್ಮಕವಾದ ಎಲ್ಲವನ್ನೂ ಪ್ರತಿನಿಧಿಸುತ್ತದೆ. ಉದಾಹರಣೆಗೆ, ಸಂಕಟ, ಅನುಮಾನ ಮತ್ತು ಭಿನ್ನಾಭಿಪ್ರಾಯ. ಕಿಚ್ ಸೃಷ್ಟಿಸುವ ಜಗತ್ತಲ್ಲಿ ಪ್ರತಿಯೊಂದು ನಗುವೂ ನಿಜವಾದದ್ದಾಗಿದ್ದು, ಪ್ರತಿಯೊಂದು ಸಾಮೂಹಿಕ ಚಲನೆಯು ಪ್ರಗತಿಯತ್ತ “ಭವ್ಯ ಮೆರವಣಿಗೆ”ಯಾಗಿದೆ. ಇದು ಭಾವನಾತ್ಮಕ, ಆದರ್ಶೀಕರಿಸಿದ ಚಿತ್ರಣವನ್ನು ಮುಂಭಾಗದಲ್ಲಿಟ್ಟು ಹಿಂದೆ ಜೀವನದ ಅಹಿತಕರ ವಾಸ್ತವಗಳನ್ನು ಮರೆಮಾಚಲು ಬಳಸುವ ಪರದೆಯಾಗಿದೆ. ವಿದೇಶಿ ಅತಿಥಿಗಳಿಗೆ ಸ್ಲಮ್ ಗಳು ಕಾಣದಂತೆ ಬಟ್ಟೆ ಪರದೆ ಕಟ್ಟುವಂತೆ. ನಾಯಕ ಹಾಗೂ ನಾಯಕತ್ವದ ಸುಂದರ ಮುಖವನ್ನಷ್ಟೇ ಮುಂದೆ ಮಾಡುವ ಸನ್ನಾಹ ಇಲ್ಲಿರುತ್ತದೆ.
ನಿರಂಕುಶ ಪ್ರಭುತ್ವವನ್ನು ಜನ ಒಪ್ಪಿಕೊಂಡಾಗ ಅವರು ಎಲ್ಲವನ್ನೂ ಗುಣಾತ್ಮಕವಾಗೇ ತೆಗೆದುಕೊಳ್ಳುತ್ತಾರೆ. ಇದು ಎಷ್ಟರಮಟ್ಟಿಗೆಂದರೆ ಪ್ರಶ್ನಿಸುವುದನ್ನೇ ಸಂಪೂರ್ಣವಾಗಿ ಮರೆಯುವಷ್ಟು. kitsch ಗೆ ‘ಕೆಲಸಕ್ಕೆ ಬಾರದ ಡೌಲು’ ಎಂಬ ಅರ್ಥವೂ ಗೂಗಲ್ ನಲ್ಲಿದೆ. ಜನರ ಬ್ರೈನ್ ವಾಶ್ ಮಾಡಲು kitsch ಉಪಯೋಗವಾಗುವುದನ್ನು ಕುಂದೆರಾ ಕಾದಂಬರಿ ಸಮರ್ಥವಾಗಿ ವಿವರಿಸುತ್ತದೆ.
ಆರೇಳು ವರ್ಷಗಳ ಹಿಂದೆ ಈ ಕಾದಂಬರಿ ಓದುವಾಗ kitsch ಎಂತಹ ಶಕ್ತಿವಂತ ರಾಜಕೀಯ ಅಸ್ತ್ರ ಎಂದು ಅರಿವಿಗೆ ಬಂದಿತ್ತು. ಆ ಕಾದಂಬರಿಯಲ್ಲಿ ಅದು ಕಮ್ಯುನಿಸ್ಟ್ ಆಡಳಿತದ ಅಸ್ತ್ರವಾಗಿ ಬಳಕೆಯಾಗಿದೆ. ಆದರೆ ಸದ್ಯದ ಕಾಲದಲ್ಲಿ ಭಾರತ, ಅಮೆರಿಕ, ದಕ್ಷಿಣ ಅಮೆರಿಕದ ಕೆಲ ರಾಷ್ಟ್ರಗಳೂ ಸೇರಿದಂತೆ ಬಲಪಂಥೀಯ ರಾಜಕೀಯದಲ್ಲೇ ಇದು ಕಾಣುತ್ತಿದೆ. ಏಕೆಂದರೆ ಅದು ವಿಮರ್ಶಾತ್ಮಕ ವಿಶ್ಲೇಷಣೆಯನ್ನು ಬೈಪಾಸ್ ಮಾಡುತ್ತದೆ, ಮತ್ತು ಭಾವನೆಗೆ ನೇರವಾಗಿ ಮನವಿ ಮಾಡುತ್ತದೆ. ಇದರಿಂದಾಗಿ ಹಲವಾರು ಮಂದಿಗೆ, ಯುವಜನರನ್ನೂ ಸೇರಿ, ತಾವು ಅಸಮಂಜಸವಾದ, ಅಸಮಾನತೆಯ ವ್ಯವಸ್ಥೆಯ ಭಾಗವಾಗುತ್ತಿರುವುದು ಅರಿವಿಗೂ ಬಂದಿರುವುದಿಲ್ಲ. ಎರಡು ವರ್ಷಗಳ ಹಿಂದೆ ದೇವಿಕಾ ರೆಗೆ ಅವರು ಬರೆದ ‘ಕ್ವಾರ್ಟರ್ ಲೈಫ್’ ಕಾದಂಬರಿಯಲ್ಲಿ, ‘ಎಪೊಲಿಟಿಕಲ್’ ಆಗಿರುತ್ತೇವೆಂದುಕೊಂಡ ಮಿಲೆನಿಯಲ್ ಹಾಗೂ ಜೆನ್ ಝೀ ಜನರೇಶನ್ ನವರಿಗೂ ಅವರ ಮನೆಬಾಗಿಲಿಗೇ ರಾಜಕೀಯ ಪ್ರವೇಶವಾಗುವುದು ಅಸಕ್ತಿಕರವಾಗಿದೆ.
ಜಂತರ್ ಮಂತರ್ ಪ್ರತಿಭಟನೆಯ ನಂತರದ ದಿನಗಳಲ್ಲಿ ಪ್ರತಿಭಟನಾಕಾರರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಗಳು, ಪ್ರತಿಭಟನೆಯ ಸಮಯದಲ್ಲಿ ಬಳಸಿದ ಭಾಷೆ, ವಿಡಂಬನೆ ಇತ್ಯಾದಿಗಳ ಬಗೆಗೆ ಸರ್ಕಾರದ ನಾಯಕರು ಮತ್ತು ಸಮರ್ಥಕರಲ್ಲಿ ಕಾಣುತ್ತಿರುವ ಸಿಡಿಮಿಡಿ ಆಕ್ರೋಶ ಇತ್ಯಾದಿಗಳನ್ನು ಗಮನಿಸಿದರೆ, ವೈಯಕ್ತಿಕತೆಯನ್ನೇ ಕಳೆಯುವ ಈ kitsch ನ ಶಕ್ತಿ ಗಮನಕ್ಕೆ ಬರುತ್ತದೆ. ಪ್ರಜಾಪ್ರಭುತ್ವದಲ್ಲಿ ವಿರೋಧ, ಅಭಿಪ್ರಾಯಭೇದ, ಆಗ್ರಹ ಎಲ್ಲವನ್ನೂ ಸ್ವಾಗತಿಸಲೇಬೇಕು. ಭಿನ್ನಾಭಿಪ್ರಾಯ ಮತ್ತು ನಾಗರಿಕ ಸ್ವಾತಂತ್ರ್ಯಗಳಿಗೆ ಸ್ಥಳಗಳನ್ನು ಕುಗ್ಗಿಸುವ ಸನ್ನಿವೇಶ ಹೋಗಬೇಕು. ಬೋರಾ ಅವರಂತಹ ವಿದ್ಯಾರ್ಥಿಗಳು ಸಾಮಾಜಿಕ ನ್ಯಾಯಕ್ಕಾಗಿ ಸಜ್ಜುಗೊಂಡಾಗ, ಅವರನ್ನು ಸಾಮಾನ್ಯವಾಗಿ “ಭವ್ಯ ಮೆರವಣಿಗೆ”ಯ ಹೊರಗಿನವರು ಎಂದು ನಿರೂಪಿಸಲಾಗುತ್ತದೆ. ಏಕೆಂದರೆ ಅವರ ವಾಸ್ತವವು ಕೃತಜ್ಞರಾಗಿರುವ, ಏಕೀಕೃತವಾಗಿರುವ ವಿದ್ಯಾರ್ಥಿ ಸಂಘಟನೆಯ ‘ಕಿಚ್’-ಅನುಮೋದಿತ ನಿರೂಪಣೆಗೆ ಹೊಂದಿಕೆಯಾಗುವುದಿಲ್ಲ.
‘ಕಿಚ್’ (kitsch) ಅನ್ನು ಬಳಸುವ ಮೂಲಕ, ಸರ್ಕಾರಗಳು ವಿಮರ್ಶಾತ್ಮಕ ಚಿಂತನೆಯ ಬದಲಿಗೆ ಹಂಚಿಕೊಂಡ ಭಾವನಾತ್ಮಕತೆಯ ಆಧಾರದ ಮೇಲೆ ಸಾಮೂಹಿಕ ಐಕ್ಯತೆಯ ಪ್ರಬಲ ಭಾವನೆಯನ್ನು ಮೂಡಿಸಬಲ್ಲವು. ನೇಹಾ ಬೋರಾ ಗಮನಿಸುವಂತೆ, ಆಡಳಿತ ವ್ಯವಸ್ಥೆಯು ವೇದಿಕೆಯ ಮೇಲಿಂದ “ಸಬಲೀಕರಣ”ದ ಬಗ್ಗೆ ಸುದೀರ್ಘವಾಗಿ ಮಾತನಾಡುತ್ತಲೇ, ಅದೇ ಸಬಲೀಕರಣಕ್ಕಾಗಿ ಬೀದಿಗಳಲ್ಲಿ ಆಗ್ರಹಿಸುತ್ತಿರುವ ಜನರನ್ನು ನಿರ್ಲಕ್ಷಿಸಬಹುದು. ಈ ವೈರುಧ್ಯವೇ ಕುಂದೇರಾ ಅವರ ‘ಕಿಚ್’ ಪರಿಕಲ್ಪನೆಯ ತಿರುಳು.
