ಟೈಮ್ ಮ್ಯಾಗಜೀನ್ ನಲ್ಲಿ ಪ್ರಕಟವಾದ ಲೇಖನ The Number of Words You Say in a Day Is Shrinking ದಲ್ಲಿ ವರ್ತಮಾನ ಕಾಲದ ಸಂಪರ್ಕ ಶೈಲಿಯ ಬದಲಾವಣೆಯ ಬಗೆಗೆ ಚರ್ಚಿಸಲಾಗಿದೆ. ಡಿಜಿಟಲ್ ಸಂವಹನದ ದಕ್ಷತೆಯಲ್ಲಿ ಹೆಚ್ಚು ವಿಶ್ವಾಸ ಹೊಂದಿರುವ ಜಗತ್ತಿನಲ್ಲಿ, ನಾವು ಕಡಿಮೆ ಮಾತನಾಡುತ್ತಾ ನಿಶ್ಯಬ್ದರಾಗುವತ್ತ ಸಾಗುತ್ತಿದ್ದೇವೆ. 2005 ಮತ್ತು 2019 ರ ನಡುವೆ, ಸರಾಸರಿ ವ್ಯಕ್ತಿ ಪ್ರತಿದಿನ ಉಚ್ಚರಿಸುವ ಪದಗಳ ಸಂಖ್ಯೆ 28% ರಷ್ಟು ಕುಸಿದಿದೆ. ಈ “ಗಣನೀಯ ನಷ್ಟ” ಎಷ್ಟರಮಟ್ಟಿಗೆ ಇದೆಯೆಂದರೆ ಪ್ರತಿ ದಿನ ಮಾತನಾಡುವ ಸುಮಾರು 330 ಕಡಿಮೆ ಪದಗಳಿಗೆ ಅಥವಾ ವರ್ಷಕ್ಕೆ ಸುಮಾರು 12,000 ಕಡಿಮೆ ಪದಗಳಿಗೆ ಇದು ಸಮನಾಗಿದೆ. ನಮ್ಮ ಮೊಬೈಲ್, ಲ್ಯಾಪ್ ಟಾಪ್ ಪರದೆಗಳ ಹಿಂದೆ ನಾವು ಹೆಚ್ಚು ಉತ್ಪಾದಕತೆಯ ಭಾವನೆಯನ್ನು ಅನುಭವಿಸಬಹುದಾದರೂ, ಕೇವಲ ಶಬ್ದಕ್ಕಿಂತ ಹೆಚ್ಚಿನದನ್ನು ನಾವು ಕಳೆದುಕೊಳ್ಳುತ್ತಿದ್ದೇವೆ; ಮಾನವ ಸಂಪರ್ಕದ ಸಂರಚನೆಯನ್ನೇ ಕಳೆದುಕೊಳ್ಳುತ್ತಿದ್ದೇವೆ.
ಕಡಿಮೆ ಹೇಳಿದಾಗ ನಾವು ಕಳೆದುಕೊಳ್ಳುವುದು
ಮಾತನಾಡದೆ, ಸ್ಮಾರ್ಟ್ಫೋನ್ ನೆರವಿನ ಸಂವಹನದ ಕಡೆಗೆ ಹೊರಳಿದಾಗ -ವಿಶೇಷವಾಗಿ 25 ವರ್ಷದೊಳಗಿನವರಲ್ಲಿ- ಒಬ್ಬರನ್ನೊಬ್ಬರು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬುದರಲ್ಲಿ ಗಮನಾರ್ಹ ಅಂತರವನ್ನು ಸೃಷ್ಟಿಸಿದೆ. ನಾವು ಮೌಖಿಕ ಸಂಭಾಷಣೆಯನ್ನು ಪಠ್ಯಕ್ಕೆ ಬದಲಾಯಿಸಿದಾಗ ಸಂವಹನದ ಹಲವು ಪದರಗಳನ್ನು ಕಳೆದುಕೊಳ್ಳುತ್ತೇವೆ: ಧ್ವನಿಯ ಟೋನ್, ದೇಹ ಭಾಷೆ, ಮುಖದ ಅಭಿವ್ಯಕ್ತಿಗಳು ಇತ್ಯಾದಿ.
ಪಠ್ಯವು ಅಂತರ್ಗತವಾಗಿ ಅಸ್ಪಷ್ಟವಾಗಿರುತ್ತದೆ. ಅಂತರವನ್ನು ಕಡಿಮೆ ಮಾಡಲು ನಾವು ಎಮೋಜಿಗಳನ್ನು ಬಳಸಿದರೂ, ಅವು ಮಾತನಾಡುವ ವಿನಿಮಯದ ಸೂಕ್ಷ್ಮ ವ್ಯತ್ಯಾಸಗಳನ್ನು ಪುನರಾವರ್ತಿಸಲು ಸಾಧ್ಯವಿಲ್ಲ. ಮಾತಿನಲ್ಲಿ ಸೇರಿಕೊಳ್ಳುವ ಮತ್ತು ಪಠ್ಯದಲ್ಲಿ ಕಾಣೆಯಾಗುವ ಸೂಕ್ಷ್ಮ ಸೂಚನೆಗಳೇ ನಮ್ಮನ್ನು ಬೇರೆಯವರೊಂದಿಗೆ ಬೆರೆತಂತ ಮತ್ತು ಅರ್ಥ ಮಾಡಿಕೊಳ್ಳಲ್ಪಟ್ಟಂತ ಭಾವನೆಗಳಿಗೆ ಕಾರಣವಾಗುತ್ತವೆ. ಡಿಜಿಟಲ್ನಲ್ಲಿ ಬೇಕಾದ ವಸ್ತುಗಳನ್ನು ಆರ್ಡರ್ ಮಾಡುವ ವ್ಯವಸ್ಥೆಗಳು ಮತ್ತು ಸಂಪರ್ಕರಹಿತ ಪಾವತಿಗಳ ದಕ್ಷತೆಯನ್ನು ಆರಿಸಿಕೊಳ್ಳುವುದರ ಮೂಲಕ, ನಾವು ನಮ್ಮ ದೈನಂದಿನ ಜೀವನವನ್ನು ಹೆಚ್ಚು “ಸುವ್ಯವಸ್ಥಿತ”ಗೊಳಿಸಿದ್ದೇವೆ ಆದರೆ ನಮ್ಮ ಸಾಮಾಜಿಕ ಜೀವನವನ್ನು ಆದಿಮಗೊಳಿಸಿದ್ದೇವೆ.
ಈ ಲೇಖನವನ್ನು ಓದುವಾಗ ಹಿಂದೊಮ್ಮೆ ಸ್ಮಾಲ್ ಟಾಕ್ (ಹರಟೆ?) ಯ ಬಗೆಗೆ ಓದಿದ್ದ ಲೇಖನ In Defence of Small Talk ನೆನಪಾಯಿತು. ಸಂವಹನದ ಉದ್ದೇಶ ಸದಾ ಕಾಲವೂ ಗಹನ ವಿಚಾರ ವಿನಿಮಯವೇ ಆಗಬೇಕಿಲ್ಲ. ಅಥವಾ ಅದು ಅತ್ಯಂತ ನಿಖರ ಮತ್ತು ದಕ್ಷ ಮಾದರಿಯದ್ದೂ ಆಗಬೇಕಿಲ್ಲ.
ಅದು ಹವಾಮಾನ ಅಥವಾ ಬಸ್ ಮಾರ್ಗಗಳ ಕುರಿತು ಇರಬಹುದು, ಆ “ಅರ್ಥಹೀನ” ಸ್ಮಾಲ್ ಟಾಕ್ಗಳು ಏಕೆ ಮುಖ್ಯವಾಗಿವೆ ಎಂದರೆ:
ಇದು ವಿವಿಧ ವಯೋವರ್ಗಗಳ ಸೇತುವೆಯಾಗಿದೆ : ವಿವಿಧ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯವರನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಅಪರಿಚಿತರನ್ನು ಅವರ “ರಾಜಕೀಯ ಅಥವಾ ಧಾರ್ಮಿಕ ನಂಬಿಕೆಗಳ” ಬಗ್ಗೆ ಕೇಳುವುದು ಉಚಿತವಾಗುವುದಿಲ್ಲ. ಅದೇ ಒಬ್ಬರ ಮೆಚ್ಚಿನ ಕ್ರೀಡಾ ತಂಡದ ಬಗ್ಗೆ ಚಾಟ್ ಮಾಡುವುದು ಸುರಕ್ಷಿತ.
ಇದು ಮಾನವೀಯತೆಯಲ್ಲಿ ನಂಬಿಕೆಯನ್ನು ನಿರ್ಮಿಸುತ್ತದೆ : ನಮ್ಮ ಪರಿಚಯಸ್ಥರ ವಲಯದ ಹೊರಗಿನ ಅಪರಿಚಿತರೊಂದಿಗಗಿನ ಸಂವಹನಗಳು ನಮ್ಮನ್ನು ಉತ್ತಮ ಮನಸ್ಥಿತಿಯಲ್ಲಿ ಇರಿಸುತ್ತವೆ ಮತ್ತು ನಮ್ಮನ್ನು ಹೆಚ್ಚು ಕನೆಕ್ಟೆಡ್ ಮಾಡುತ್ತವೆ ಎಂದು ಸಂಶೋಧನೆ ತೋರಿಸುತ್ತದೆ.
ಇದು ಅಭ್ಯಾಸದ ಅಗತ್ಯವಿರುವ ಕೌಶಲ್ಯ: ಸಾಮಾಜಿಕ ಕೌಶಲ್ಯವು ಸ್ನಾಯುವಿನಂತೆ ; ನೀವು ಅದನ್ನು ಬಳಸದಿದ್ದರೆ, ನೀವು ಅದನ್ನು ಕಳೆದುಕೊಳ್ಳುತ್ತೀರಿ. ಸಂಭಾಷಣೆಯ ಕಲೆಯನ್ನು ಕರಗತ ಮಾಡಿಕೊಳ್ಳುವುದು ಒಬ್ಬ ಉತ್ತಮ ಅತಿಥಿ, ಹೋಸ್ಟ್ ಅಥವಾ ಸಹೋದ್ಯೋಗಿಯಾಗಲು ಅತ್ಯಗತ್ಯ.
ಇದು ಬೇರೆಯವರಿಗೆ ಸೂಕ್ಷ್ಮವಾಗಿ ನಮ್ಮನ್ನು ಪರಿಚಯಿಸುವುದಕ್ಕೂ ಅವಕಾಶ ನೀಡುತ್ತದೆ: ಪ್ರಯಾಸ ಪೂರ್ಣವಾದ ಎಚ್ಚರಿಕೆಯಿಂದ ಆಡುವ “ದೊಡ್ಡ ಮಾತು” ಗಳಿಗಿಂತ ಭಿನ್ನವಾಗಿ, ನಾವು ಆಡುವ ಚಿಕ್ಕ ಪುಟ್ಟ ಮಾತುಗಳು ನಮ್ಮ ವ್ಯಕ್ತಿತ್ವವನ್ನು ಬಿಚ್ಚಿಡುತ್ತವೆ.
ಇದನ್ನೂ ಓದಿ :
