ಶನಿವಾರ ‘ದಿ ಗಾರ್ಡಿಯನ್’ ಪತ್ರಿಕೆಯಲ್ಲಿ ಪ್ರಕಟವಾದ ‘Social media bans go global: big tech faces a reckoning after Australia’s crackdown‘ ಎಂಬ ಲೇಖನದಲ್ಲಿ ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು ಬಳಸುವುದನ್ನು ನಿಯಂತ್ರಿಸುವ ವಿಚಾರದಲ್ಲಿ ಹಲವು ದೇಶಗಳು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ವಿವರಿಸಲಾಗಿದೆ.
ಡಿಸೆಂಬರ್ 2024 ರಲ್ಲಿ, ಆಸ್ಟ್ರೇಲಿಯಾವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧವನ್ನು ಪ್ರಾರಂಭಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿತು. ಈ ಕ್ರಮವು ಆರಂಭದಲ್ಲಿ ಉಳಿದವರಲ್ಲಿ ಆಶ್ಚರ್ಯ ಮಿಶ್ರಿತ ಮೆಚ್ಚುಗೆಯನ್ನು ಉಂಟುಮಾಡಿತು. ಆರು ತಿಂಗಳ ನಂತರ, ಯುಕೆಯಿಂದ ಮಲೇಷಿಯಾದವರೆಗೆ, ಆಸ್ಟ್ರೇಲಿಯಾದ ಕ್ರಮವನ್ನು ತಂತ್ರಜ್ಞಾನದ “ಬಿಗ್ ಟೊಬ್ಯಾಕೊ” ಕ್ಷಣವೆಂದು ಅನೇಕರು ಕರೆಯುತ್ತಿರುವುದನ್ನು ನೋಡಿದರೆ ಆಸ್ಟ್ರೇಲಿಯಾದ ನಿರ್ಧಾರ ಒಂದು ಪ್ರತ್ಯೇಕವಾದ ಘಟನೆಯಾಗಿರದೆ, ಸಾಮಾಜಿಕ ಮಾಧ್ಯಮದ ಹಾನಿ ಮತ್ತು ಅದರ ನಿಯಂತ್ರಣದ ಬಗೆಗೆ ಜಾಗತಿಕ ಲೆಕ್ಕಾಚಾರ ಪ್ರಾರಂಭವಾಗಿದೆ ಎಂಬುದು ಸ್ಪಷ್ಟವಾಗಿದೆ. ಕಟ್ಟುನಿಟ್ಟಾದ ನಿಯಂತ್ರಣದ ಪರವಾಗಿ ಸರ್ಕಾರಗಳು ಗಮನ ಹರಿಸುತ್ತಿದ್ದು ಹಿಂದಿನ ಉದಾಸೀನದ ಧೋರಣೆಯನ್ನು ಕೈಬಿಡುತ್ತಿವೆ.
ಗ್ಲೋಬಲ್ ರಿಪ್ಪಲ್ ಎಫೆಕ್ಟ್
ಆಸ್ಟ್ರೇಲಿಯಾದ ಕ್ರಮವು ಪ್ರಪಂಚದ ಉಳಿದ ಭಾಗಗಳಿಗೆ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಿದೆ. 40 ಕ್ಕೂ ಹೆಚ್ಚು ದೇಶಗಳಲ್ಲಿ ನಿಯಂತ್ರಕರಲ್ಲಿ ಕುತೂಹಲ ಮತ್ತು ಕ್ರಿಯೆಯನ್ನು ಹುಟ್ಟುಹಾಕಿದೆ. ಆಸ್ಟ್ರೇಲಿಯಾದ ನಡೆಯನ್ನು ಅನುಸರಿಸಿ:
ಇಂಡೋನೇಷಿಯಾ ಮತ್ತು ಮಲೇಷಿಯಾ ಈಗಾಗಲೇ 16 ವರ್ಷದೊಳಗಿನ ಮಕ್ಕಳನ್ನು ಹೆಚ್ಚಿನ ಅಂತರ್ಜಾಲ ವೇದಿಕೆಗಳಿಂದ ನಿರ್ಬಂಧಿಸಲು ಪ್ರಾರಂಭಿಸಿವೆ.
ಯುನೈಟೆಡ್ ಕಿಂಗ್ಡಮ್ ಇತ್ತೀಚೆಗೆ ಇದೇ ರೀತಿಯ ನಿಷೇಧವನ್ನು 2027 ರ ಆರಂಭದಲ್ಲಿ ಜಾರಿಗೆ ತರಲು ಉದ್ದೇಶಿಸಿದೆ.
ನಾರ್ವೆ ತನ್ನ ವಯಸ್ಸಿನ ಮಿತಿಯನ್ನು 13 ರಿಂದ 16 ಕ್ಕೆ ಹೆಚ್ಚಿಸಲು ನೋಡುತ್ತಿದೆ. ಫ್ರಾನ್ಸ್ ಮತ್ತು ಆಸ್ಟ್ರಿಯಾ ವಯಸ್ಸಿನ ಮಿತಿಯನ್ನು ಕ್ರಮವಾಗಿ 15 ಮತ್ತು 14 ಕ್ಕೆ ಹೊಂದಿಸಿವೆ.
ಅನೇಕ ರಾಷ್ಟ್ರಗಳಲ್ಲಿ, ಪೋಲೆಂಡ್, ಡೆನ್ಮಾರ್ಕ್ ಮತ್ತು ಇಂಗ್ಲೆಂಡ್ನಲ್ಲಿ ಕಂಡುಬರುವಂತೆ ಈ ಸಾಮಾಜಿಕ ಮಾಧ್ಯಮ ನಿರ್ಬಂಧಗಳನ್ನು ಶಾಲೆಗಳಲ್ಲಿ ಸ್ಮಾರ್ಟ್ಫೋನ್ಗಳ ಮೇಲಿನ ನಿಷೇಧಗಳೊಂದಿಗೆ ಜೋಡಿಸಲಾಗುತ್ತಿದೆ.
ವ್ಯಸನದ ಎಂಜಿನಿಯರಿಂಗ್
ಸಾಮಾಜಿಕ ಮಾಧ್ಯಮಗಳ ಬಳಕೆಯ ನಿಯಂತ್ರಣಕ್ಕೆ ಹಲವು ದೇಶಗಳು ಮುಂದಾಗುತ್ತಿರುವುದಕ್ಕೆ ಕಾರಣ ಈ ಪ್ಲಾಟ್ಫಾರ್ಮ್ಗಳು ವ್ಯಸನ(addiction )ಕ್ಕೆ ಕಾರಣವಾಗುತ್ತವೆಂಬ ಬಗ್ಗೆ ಹೆಚ್ಚುತ್ತಿರುವ ಪುರಾವೆಗಳು. ಕ್ಯಾಲಿಫೋರ್ನಿಯಾದ ಪ್ರಕರಣದಲ್ಲಿ ಇತ್ತೀಚೆಗೆ ಮೆಟಾ ಮತ್ತು ಯೂಟ್ಯೂಬ್ ಕಂಪನಿಗಳು ಯುವ ಬಳಕೆದಾರರನ್ನು “ಹುಕ್” ಮಾಡಲು ಉದ್ದೇಶಪೂರ್ವಕವಾಗಿ ವ್ಯಸನಕಾರಿ ಉತ್ಪನ್ನಗಳನ್ನು ವಿನ್ಯಾಸಗೊಳಿಸಿದ ಹೊಣೆಗಾರಿಕೆಯನ್ನು ಹೊಂದಿವೆ. ಪ್ರಕರಣದ ವಕೀಲರು ಇದನ್ನು “ವ್ಯಸನದ ಇಂಜಿನಿಯರಿಂಗ್” ಎಂದು ವಿವರಿಸಿದ್ದಾರೆ. ಮಗುವೊಂದು ಫೋನ್ ಹಿಡಿದರೆ ಅದನ್ನು ಕೆಳಗೆ ಇಡುವುದಕ್ಕೆ ಒಪ್ಪದಿರುವಂತೆ ವೈಶಿಷ್ಟ್ಯಗಳನ್ನು ನಿರ್ದಿಷ್ಟವಾಗಿ ರಚಿಸಲಾಗಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಕಾನೂನಾತ್ಮಕವಾಗಿ ಪ್ರಶ್ನಿಸುವ ಈ ಬದಲಾವಣೆಯು ವಿಶ್ವದಾದ್ಯಂತ ಹಲವೆಡೆ ಪ್ರತಿಬಿಂಬಿತವಾಗಿದೆ. ವೇದಿಕೆಗಳು ಮಾನಸಿಕ ಆರೋಗ್ಯವನ್ನು ಹಾನಿಗೊಳಿಸುತ್ತವೆ ಮತ್ತು ಅಪ್ರಾಪ್ತ ವಯಸ್ಕರನ್ನು ಲೈಂಗಿಕ ಪ್ರಿಡೇಟರ್ ಗಳಿಂದ ಮತ್ತು ಅಪಾಯಕಾರಿ ವಿಷಯಗಳಿಂದ ರಕ್ಷಿಸಲು ವಿಫಲವಾಗಿವೆ ಎಂದು ಹಲವು ಕುಟುಂಬದವರು ಮತ್ತು ಶಾಲಾ ವಲಯದವರು ಆರೋಪಿಸಿದ್ದಾರೆ.
ನಿಯಂತ್ರಣದ ವಿಚಾರದಲ್ಲಿ ಹೆಚ್ಚಿನ ಉತ್ಸಾಹ ಕಾಣುತ್ತಿದೆಯಾದರೂ, ಯಾವುದು ಪರಿಣಾಮಕಾರಿ ತಂತ್ರ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆಮ್ನೆಸ್ಟಿ ಇಂಟರ್ನ್ಯಾಶನಲ್ ಸಂಸ್ಥೆಯು ನಿಷೇಧಗಳನ್ನು “ನಿಷ್ಪರಿಣಾಮಕಾರಿ ತ್ವರಿತ ಪರಿಹಾರ” ಎಂದು ಟೀಕಿಸಿದೆ. ಇಂತಹ ನಿಷೇಧಗಳು ಮಕ್ಕಳನ್ನು ಹೆಚ್ಚು ಅಪಾಯಕಾರಿ, ಗುಪ್ತ ವೇದಿಕೆಗಳ ಕಡೆಗೆ ತಳ್ಳುವ ಮೂಲಕ ಇನ್ನೂ ಹೆಚ್ಚಿನ ಅಪಾಯಕ್ಕೆ ಒಡ್ಡಬಹುದು ಎಂದು ವಾದಿಸಿದ್ದಾರೆ.
ತೆಗೆದುಕೊಳ್ಳುವ ಕ್ರಮಗಳ ಪ್ರಾಯೋಗಿಕತೆಯು ಸಹ ಒಂದು ಪ್ರಮುಖ ಕಾಳಜಿಯಾಗಿದೆ. ಆಸ್ಟ್ರೇಲಿಯಾದಲ್ಲಿ, 5 ಮಿಲಿಯನ್ ಖಾತೆಗಳನ್ನು ಮುಚ್ಚಲಾಗಿದೆ ಎಂದು ವರದಿಯಾಗಿದೆ. ನಿಷೇಧದ ಮೊದಲು ಖಾತೆಗಳನ್ನು ಹೊಂದಿದ್ದ ಮೂರನೇ ಎರಡರಷ್ಟು ಯುವಜನರು ಇತರ ಮಾರ್ಗಗಳ ಮೂಲಕ ಈ ಖಾತೆಗಳಿಗೆ ತಮ್ಮ ಪ್ರವೇಶವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ. UK ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್ ರಂತಹ ಕೆಲವು ನಾಯಕರು ಮಕ್ಕಳು ಮದ್ಯದ ಕಾನೂನುಗಳನ್ನು ಬೈಪಾಸ್ ಮಾಡಿದರೂ ಮಕ್ಕಳಿಗೆ ಮದ್ಯಪಾನ ನಿಷೇಧಿಸುವ ಕಾನೂನು ಇರುವಂತೆ, ಸಾಮಾಜಿಕ ಮಾಧ್ಯಮಗಳ ವಿಚಾರದಲ್ಲೂ ಕಾನೂನಾತ್ಮಕ ನಿಷೇಧವನ್ನು ಸಮರ್ಥಿಸುತ್ತಾರೆ. ಇತರ ಕೆಲವರು ನಾಯಕರಿಗೆ ಇದು ಮನವರಿಕೆಯಾಗುವುದಿಲ್ಲ. ಉದಾಹರಣೆಗೆ, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ನಿಷೇಧವನ್ನು ತಿರಸ್ಕರಿಸಿದ್ದಾರೆ. ಇದು ತುಂಬಾ ಸುಲಭವಾಗಿ ಬೈಪಾಸ್ ಆಗುತ್ತದೆ ಎಂದು ಅವರು ವಾದಿಸುತ್ತಾರೆ.
ವಿಭಿನ್ನ ಪ್ರೇರಣೆಗಳು
ಕುತೂಹಲವೆಂದರೆ, ಈ ನಿಷೇಧಗಳ ಪ್ರೇರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ. ಈಕ್ವೆಡಾರ್ನಲ್ಲಿ, ಕ್ರಿಮಿನಲ್ ಸಂಸ್ಥೆಗಳು ಅಪ್ರಾಪ್ತ ವಯಸ್ಕರನ್ನು ನೇಮಿಸಿಕೊಳ್ಳುವುದನ್ನು ತಡೆಯುವತ್ತ ಗಮನಹರಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ನಲ್ಲಿ, LGBTQ ವಸ್ತು ಅಥವಾ ಅಶ್ಲೀಲತೆಗೆ ಪ್ರವೇಶವನ್ನು ಸೀಮಿತಗೊಳಿಸುವಂತಹ ಮಾನಸಿಕ ಆರೋಗ್ಯ ಕಾಳಜಿ ಮತ್ತು ಸಂಪ್ರದಾಯವಾದಿ ಪ್ರೇರಣೆಗಳು. ಏತನ್ಮಧ್ಯೆ, ಟರ್ಕಿಯಲ್ಲಿ, ಸಾಮಾಜಿಕ ಮಾಧ್ಯಮ ವೇದಿಕೆಗಳು ಸರ್ಕಾರ ನಡೆಸುವ ಲಾಗಿನ್ ಪೋರ್ಟಲ್ನ ಮೂಲಕ ಪ್ರವೇಶ ಒದಗಿಸಬೇಕೆಂಬ ಯೋಜನೆ ಜನರಲ್ಲಿ ತಮ್ಮ ಮೇಲೆ ಸರ್ಕಾರದ ಕಣ್ಗಾವಲಿನ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.
ಮಕ್ಕಳ ಜೀವನದಲ್ಲಿ “ಅಸಾಧಾರಣ ಪ್ರಮಾಣದ ತಂತ್ರಜ್ಞಾನ” ವು ಹಿಡಿತ ಸಾಧಿಸುತ್ತಿರುವ ಬಗ್ಗೆ ಜನರಲ್ಲಿ ಕಾಳಜಿ ಹೆಚ್ಚುತ್ತಿರುವಂತೆಯೇ, ನಿಯಂತ್ರಣದ ಬಗೆಗೂ ಜಾಗತಿಕವಾಗಿ ಒಮ್ಮತವು ಮೂಡುತ್ತಿದೆ: ಯಾರೂ ಪರಿಶೀಲಿಸದ ಸಾಮಾಜಿಕ ಮಾಧ್ಯಮ ಬೆಳವಣಿಗೆಯ ಯುಗವು ಮುಗಿದಿದೆ.
