ಮುಕುಲ್ ಕೇಶವನ್ ಅವರು ದಿ ಟೆಲಿಗ್ರಾಫ್ ಪತ್ರಿಕೆಗೆ ಬರೆದಿರುವ “Strange Orchids: Donald Trump’s abandonment of rules-based pieties has stymied Beltway liberals“ ಲೇಖನದಲ್ಲಿ ಅವರು ಅಮೆರಿಕ ದೇಶ ಮತ್ತು ಅದರ ಸಮರ್ಥಕರನ್ನು ವ್ಯಂಗ್ಯವಾದ ಮತ್ತು ಹರಿತವಾದ ಪದಗಳಿಂದ ಟೀಕಿಸುತ್ತಾರೆ. ಹಲವು ದಶಕಗಳಿಂದ ಜಗತ್ತಿನ ಹಲವೆಡೆ ರಾಜಕೀಯವಾಗಿ ಹಾಗೂ ತನ್ನ ಪ್ರಬಲ ಶಸ್ತ್ರ ಶಕ್ತಿಯೊಡನೆ ಮಧ್ಯಪ್ರವೇಶಿಸುವುದಕ್ಕೆ ಒಂದು ಬಗೆಯ ಸೂಪರ್ ಲೈಸೆನ್ಸ್ ಅನ್ನು ಅಮೆರಿಕವು ಬಳಸಿದೆ. ಅಮೆರಿಕನ್ ಅಸಾಧಾರಣವಾದ (american exceptionalism) ಎಂದು ಕರೆಯಲಾಗುವ ಈ ವಿಶೇಷ ಸವಲತ್ತನ್ನು ಬಳಸಿ ಹಲವಾರು ಸ್ವತಂತ್ರ ರಾಷ್ಟ್ರಗಳ ಮೇಲೆ ದಾಳಿಗಳನ್ನು ನಡೆಸಿದೆ. ಮತ್ತು ಅಂತಹ ದಾಳಿಗಳನ್ನು “ಒಳ್ಳೆಯ ಉದ್ದೇಶ” ವೆಂಬ ಸಿದ್ಧಾಂತದ ಮೂಲಕ ಸಮರ್ಥಿಸಿಕೊಂಡಿದೆ. ಅಮೆರಿಕದ ಇಂತಹ ದಾಳಿಗಳನ್ನು ಯಾವಾಗಲೂ ಸಮರ್ಥಿಸುವ ಕೆಲವರನ್ನು ಕೇಶವನ್ ಅವರು ‘strange orchids rooted in the fungus of American exceptionalism’ (ಅಮೆರಿಕದ ‘ಅಸಾಧಾರಣವಾದ’ವೆಂಬ ಶಿಲೀಂಧ್ರದಲ್ಲಿ ಬೇರುಬಿಟ್ಟರುವ ವಿಚಿತ್ರ ಸೀತಾಳೆ ಹೂಗಳು) ಎಂದು ಕರೆಯುತ್ತಾರೆ.
The road to hell is paved with good intentions (ನರಕದ ದಾರಿ ಒಳ್ಳೆಯ ಉದ್ದೇಶಗಳ ಹಾಸಿನ ಮೇಲೆ ಸಾಗುತ್ತದೆ) ಎಂಬ ಇಂಗ್ಲಿಷ್ ನಾಣ್ನುಡಿ ನೆನಪಾಗುತ್ತದೆ. ನಾನು ಪತ್ರಿಕಗಳಲ್ಲಿ ಓದಿದ ಅಮೆರಿಕದ ‘ಒಳ್ಳೆಯ ಉದ್ದೇಶ’ ದ ಮೊದಲ ದಾಳಿ 90-91 ರ ಮೊದಲ ಇರಾಕ್ ಯುದ್ಧ. ಆಗಷ್ಟೇ ಕಾಲೇಜ್ ಮುಗಿಸಿದ್ದ ದಿನಗಳಲ್ಲಿ ಈ ಯುದ್ಧದ ಕುರಿತು ಆಸಕ್ತಿಯಿಂದ ಓದುತ್ತಿದ್ದುದು ನೆನಪಾಗುತ್ತಿದೆ. ಟೆಲಿವಿಷನ್ ನಲ್ಲಿ ನೇರ ಪ್ರಸಾರವಾದ ಮೊದಲ ಯುದ್ಧ ಎಂದೂ ಇದನ್ನು ಕರೆಯುತ್ತಾರೆ. ಅಲ್ಲಿಂದ ಮುಂದೆ ಜಾರ್ಜ್ ಡಬ್ಲ್ಯೂ ಬುಷ್ ನೇತೃತ್ವದ ಅಫ್ಘಾನಿಸ್ತಾನ್ ಮೇಲಿನ ದಾಳಿ, ಇರಾಕ್ ಆಕ್ರಮಣ, ಈಚೆಗಿನ ಅತ್ಯಂತ ಕ್ರೌರ್ಯದ ಗಾಜಾ ಯುದ್ಧ ಇವುಗಳನ್ನೂ ನೋಡಿದ್ದೇವೆ. ಗಾಜಾವು ಮುಖ್ಯವಾಗಿ ಇಸ್ರೇಲಿಯರು ನಡೆಸಿದ್ದಾದರೂ ಅವರ ಬೆನ್ನಿಗೆ ಅಮೆರಿಕನ್ನರಿದ್ದದ್ದು ಸಹ ಗಮನಿಸಬೇಕಾದ ಅಂಶ.
ಕೇಶವನ್ ತಮ್ಮ ಲೇಖನದಲ್ಲಿ CNN ನ ಫರೀದ್ ಝಕಾರಿಯ ಮತ್ತು ನ್ಯೂಯಾರ್ಕ್ ಟೈಮ್ಸ್ ನ ಎಜ್ರಾ ಕ್ಲೇನ್ ಅವರ ನಡುವಿನ ಈಚಿನ ಪಾಡ್ ಕಾಸ್ಟ್ ನ ಚರ್ಚೆಯನ್ನು ಮುಖ್ಯವಾಗಿ ಗುರಿಯಾಗಿಸಿದ್ದಾರೆ. ಅಮೆರಿಕದ ಇಂತಹ ಲಿಬರಲ್ ಗಳು ಅಧ್ಯಕ್ಷ ಟ್ರಂಪ್ ಅವರ ಅಸಭ್ಯ ಹೇಳಿಕೆಗಳಿಂದ ಮುಜುಗರ ಪಡುತ್ತಾರೆ ವಿನಃ ಅಮೆರಿಕದ ಶಸ್ತ್ರ ಶಕ್ತಿ ಮತ್ತು ಅದು ತರುವ ಹಿಂಸೆಯ ಬಗೆಗೆ ಅಲ್ಲ ಎಂದು ಅವರು ಬರೆಯುತ್ತಾರೆ.
ಪಾಡ್ ಕಾಸ್ಟ್ ನಲ್ಲಿ ಫರೀದ್ ಝಕಾರಿಯಾ ಹತ್ತಾರು ಸಾವಿರ ಜನಗಳ ಸಾವಿಗೆ ಕಾರಣವಾದ ಎರಡನೆ ಇರಾಕ್ ಯುದ್ಧದ ಬಗೆಗೆ ಮಾತನಾಡುವಾಗ ಜಾರ್ಜ್ ಡಬ್ಲ್ಯೂ ಬುಷ್ ಅವರ ಸಮರ್ಥನೆ ಮಾಡುತ್ತಾ ಬುಷ್ ಆಕ್ರಮಣವನ್ನು “ಮೂಲಭೂತವಾಗಿ ಆದರ್ಶವಾದಿ, ಮಹತ್ವಾಕಾಂಕ್ಷೆಯ ಮಿಷನ್” ಎಂದು ವರ್ಣಿಸುತ್ತಾರೆ. ಇರಾಕ್ ನಲ್ಲಿ “ವೆಪನ್ಸ್ ಆಫ್ ಮಾಸ್ ಡಿಸ್ಟ್ರಕ್ಷನ್ ಇವೆ” ಎಂಬ “ಸುಳ್ಳು ಭಯ” ದ ನಿರೂಪಣೆಯ ಮೂಲಕ ಹತ್ತಾರು ಸಾವಿರ ಜನರು ಕೊಲ್ಲಲ್ಪಟ್ಟರೂ ಸಹ, ಬುಷ್ “ಸಭ್ಯತೆಗಳನ್ನು ಕಾಪಾಡಿಕೊಂಡರು” ಮತ್ತು ಯುದ್ಧವು ಅಮೆರಿಕದ “ಮಹಾನ್ ಉನ್ನತ ಮಿಷನ್” ಆಗಿತ್ತು ಎಂದು ಝಕಾರಿಯಾ ವಾದಿಸುತ್ತಾರೆ. ಎಜ್ರಾ ಕ್ಲೈನ್ನೊಂದಿಗಿನ ಇದೇ ಸಂಭಾಷಣೆಯಲ್ಲಿ, ಝಕಾರಿಯಾ ಅವರು ಈಚೆಗೆ ಇರಾನ್ಗೆ ಟ್ರಂಪ್ ಒಡ್ಡಿದ “ಜನಾಂಗೀಯ ಬೆದರಿಕೆ” ಯನ್ನು ಬುಷ್ನ ಇರಾಕ್ನ ಆಕ್ರಮಣದೊಂದಿಗಿನ ತುಲನೆಯಲ್ಲಿ ನೀಚ ರೀತಿಯದ್ದೆಂದು ಕಾಣುತ್ತಾರೆ. ಝಕಾರಿಯಾ ಮತ್ತು ಕ್ಲೇನ್ ರ ಮಾತುಗಳಲ್ಲಿ ಕೇಶವನ್ ಅವರು narcissism (ಆತ್ಮರತಿಯ) ಛಾಯೆಯನ್ನು ಗಮನಿಸುತ್ತಾರೆ. ಅಮೆರಿಕನ್ ಚಲನಚಿತ್ರಗಳೂ ಸಹ ಅಮೆರಿಕದ ಯುದ್ಧಗಳಲ್ಲಿ ಸಾಯುವ ಸ್ಥಳೀಯರ ಬಗೆಗೆ ಕಾಳಜಿಯನ್ನೇ ತೋರಿಸದೆ ಕೇವಲ ಈ ಯುದ್ಧಗಳಿಂದ ಅಮೆರಿಕನ್( ಸೈನಿಕ) ರಿಗಾಗುವ ‘ಟ್ರಾಮ’ ವನ್ನಷ್ಟೆ ಹೈಲೈಟ್ ಮಾಡುವುದನ್ನು ಗುರುತಿಸುತ್ತಾರೆ. ಜೋಸೆಫ್ ಕಾನ್ರಾಡ್ ನ ಅದ್ಭುತ ಕೃತಿ Heart of Darkness ನಿಂದ ಪ್ರಭಾವಿತವಾಗಿ ಸೃಷ್ಟಿಸಿದ ಫ್ರಾನ್ಸಿಸ್ ಫೋರ್ಡ್ ಕೊಪೋಲ ನಿರ್ದೇಶನದ Apocalypse Now ಚಿತ್ರವನ್ನು ಅವರು ಉದಾಹರಿಸುತ್ತಾರೆ. ಈ ಚಿತ್ರವು ಅಮೆರಿಕದ ವಿಯಟ್ನಾಮ್ ಯುದ್ಧಕ್ಕೆ ಸಂಬಂಧಿಸಿದ್ದಾಗಿದೆ.
ಕ್ಲೈನ್ ಮತ್ತು ಝಕಾರಿಯಾ ಅವರಂತಹ ಪಂಡಿತರು ಪ್ರದರ್ಶಿಸಿದ ಆಕ್ರೋಶವು ಹೆಚ್ಚಾಗಿ ಸಂಬಂಧಿಸಿರುವುದು ಅಂತರರಾಷ್ಟೀಯ ಸಂಘರ್ಷಗಳಲ್ಲಿ ಅಮೆರಿಕದ ಒಳಪ್ರವೇಶದ ಸಮರ್ಥನೆಗೆ ತಾವು ಸೃಷ್ಟಿಸಿಕೊಂಡಿದ್ದ ಬೌದ್ಧಿಕ ಚೌಕಟ್ಟಿನ ನಷ್ಟದ ಬಗ್ಗೆ. ನಾಯಕನು ‘ಸರಿ’ ಯಾದ ಮಾತುಗಳನ್ನು ಹೇಳುತ್ತಿರುವವರೆಗೂ ಅವರು ಯುದ್ಧಕ್ಕೆ “ಅಮೆರಿಕದ ಪ್ರಾಯೋಜಕತ್ವವನ್ನು” ಸಮರ್ಥಿಸಿಕೊಳ್ಳಲು ಸುಲಭವಾಗುವುದು.
ಗಾಜಾದಲ್ಲಿ ಯುದ್ಧಕ್ಕೆ ಬಿಡೆನ್ ಆಡಳಿತದ ಬೆಂಬಲದ ಸಮಯದಲ್ಲಿ ನಾವು ಇದನ್ನು ಸ್ಪಷ್ಟವಾಗಿ ನೋಡಿದ್ದೇವೆ. ‘ಮಾನವೀಯ ಕಾಳಜಿ’ ಯಂತಹ ನುಡಿಗಟ್ಟುಗಳನ್ನು ಬಳಸಿಕೊಂಡು ಬಿಡೆನ್ ಕಾರ್ಯನಿರ್ವಹಿಸಿದ ಕಾರಣ, ಉದಾರವಾದಿಗಳು ಗಾಜಾದಲ್ಲಿ ಇಸ್ರೇಲಿನ ಕ್ರೂರ ದಾಳಿಗೆ ಅಮೇರಿಕಾದ ಸಹಾಯವನ್ನು ಸಮರ್ಥಿಸಲು ಸಾಧ್ಯವಾಯಿತು.
ಡೊನಾಲ್ಡ್ ಟ್ರಂಪ್ ಇತರರ ವ್ಯವಹಾರಗಳಲ್ಲಿ ಅಮೆರಿಕದ ಮಧ್ಯಪ್ರವೇಶಕ್ಕೆ “ನಿಯಮ-ಆಧಾರಿತ ( rules-based) ವ್ಯವಸ್ಥೆಯ ರಕ್ಷಣೆ” , “ಪ್ರಜಾಪ್ರಭುತ್ವವನ್ನು ಬಿತ್ತುವುದು” ಅಥವಾ ವಿದೇಶಿ ಜನಸಮೂಹಗಳ “ವಿಮೋಚನೆ” ಮುಂತಾದ ಉನ್ನತ ಧ್ಯೇಯವಿರುವ ಸಮರ್ಥನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಟ್ರಂಪ್ ಒಂದು ನಾಗರಿಕತೆಯನ್ನೇ “ನಾಶಗೊಳಿಸುವುದಾಗಿ” ಬೆದರಿಕೆ ಹಾಕುವಾಗ ಅವರ ಸಮರ್ಥಕರಿಗೆ ಅವರನ್ನು ಸಮರ್ಥಿಸಿಕೊಳ್ಳಲು ಸಮಸ್ಯೆ ಆಗುತ್ತದೆ. ಆಗ ಇನ್ನೊಂದು ದೇಶದ ನಾಗರಿಕರ ಸಾವುಗಳನ್ನು “ದುರಂತ ಹಾನಿ” ( tragic collateral) ಎಂದು ಸಮರ್ಥಿಸಲು ಆಗುವುದಿಲ್ಲ.
ಇದು “ಸರ್ಕಾರಿ ಲಿಬರಲ್” ವರ್ಗಕ್ಕೆ ( ಅಮೆರಿಕನ್ ಮತ್ತು ಇತರ ಪಾಶ್ಚಿಮಾತ್ಯರನ್ನೂ ಸೇರಿದ ಸಮರ್ಥಕರನ್ನು ಕೇಶವನ್ ಅವರು ವರ್ಣಿಸುವಂತೆ) - ‘ ಮುಕ್ತ ವ್ಯಾಪಾರ’ ಮತ್ತು ‘ ಮುಕ್ತ ಪ್ರಪಂಚ’ ದ ಚತುರ ನುಡಿಗಟ್ಟುಗಳ ಮೂಲಕ ಅಮೇರಿಕನ್ ಶಕ್ತಿಗೆ ಸೇವೆ ಸಲ್ಲಿಸುವುದಕ್ಕೆ “ಮುಜುಗರ” ಉಂಟುಮಾಡುತ್ತಿದೆ.
