ಅಕ್ಟೊಬರ್ 8 ರಂದು ಅಮೆರಿಕಾದ ವಾಷಿಂಗ್ಟನ್ನಲ್ಲಿ ವಲಸಿಗರಿಗೆ ಸಂಬಂಧಪಟ್ಟಂತೆ ಎರಡು ಗಮನಾರ್ಹ ಘಟನೆಗಳು ನಡೆದವು: ಮೈಕ್ರೋಸಾಫ್ಟ್ ಸೇರಿದಂತೆ ಕೆಲವು ಐಟಿ ಕಂಪನಿಗಳನ್ನು ಗ್ರೀನ್ ಕಾರ್ಡ್ನ ಮೊದಲ ಹಂತವಾದ PERM (Permanent Labour Certification) ಕಾರ್ಯಕ್ರಮದಿಂದ ಅಮಾನತುಗೊಳಿಸಲಾಯಿತು. ಆದರೆ ಅದೇ ದಿನ, ಮೈಕ್ರೋಸಾಫ್ಟ್ CEO ಸತ್ಯ ನಾದೆಲ್ಲಾ ಅವರಿಗೆ ಅಮೆರಿಕದ ‘ರಾಷ್ಟ್ರೀಯ ತಂತ್ರಜ್ಞಾನ ಪದಕ’ವನ್ನು ನೀಡಿ ಗೌರವಿಸಲಾಯಿತು. ಒಂದೆಡೆ ಅಮೆರಿಕದಲ್ಲಿ ಯಶಸ್ವಿಯಾದ ವಲಸಿಗರನ್ನು ಸಂಭ್ರಮಿಸುತ್ತಾ, ಇನ್ನೊಂದೆಡೆ ಈಗಿನ್ನೂ ನೆಲೆಯೂರುತ್ತಿರುವ ವಲಸಿಗರಿಗೆ ಅವಕಾಶದ ಬಾಗಿಲನ್ನು ಮುಚ್ಚುವ ದ್ವಿಮುಖ ವಲಸೆ ನೀತಿಯನ್ನು ಇದು ತೋರಿಸುತ್ತದೆ.
ಅಮೆರಿಕದಲ್ಲಿ H-1B ವೀಸಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಭಾರತೀಯರು 6 ವರ್ಷಗಳ ಗಡುವು ಮತ್ತು ದೀರ್ಘಾವಧಿಯ ಗ್ರೀನ್ ಕಾರ್ಡ್ ಬ್ಯಾಕ್ಲಾಗ್ಗೆ ಸಿಲುಕಿದ್ದಾರೆ. PERM ಕಾರ್ಯಕ್ರಮದ ಅಮಾನತು, 6 ನೇ ವರ್ಷದ ಕೊನೆಯಲ್ಲಿರುವ ಅನೇಕ ಕಾರ್ಮಿಕರು ಅಮೆರಿಕದಲ್ಲಿ ಉಳಿದುಕೊಳ್ಳುವ ಪ್ರಮುಖ ಅವಕಾಶವನ್ನು ಕಳೆದುಕೊಳ್ಳುವ ಅಪಾಯವನ್ನು ಉಂಟುಮಾಡಿದೆ. H-1B ವೀಸಾಗಳಲ್ಲಿ US ನಲ್ಲಿ ಕೆಲಸ ಮಾಡುವವರಿಗೆ, ಆರು ವರ್ಷಗಳ ಮಿತಿ ಇರುತ್ತದೆ. ಉದ್ಯೋಗದಾತ ಕಂಪನಿಯು ಉದ್ಯೋಗಿಯ ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸಿದ್ದು ಉದ್ಯೋಗಿಯು ಕೆಲವು ಗ್ರೀನ್-ಕಾರ್ಡ್ ಮೈಲಿಗಲ್ಲುಗಳನ್ನು ತಲುಪಿದ್ದರೆ ಮಾತ್ರ ಅದನ್ನು ಮೀರಿ ವಿಸ್ತರಿಸಬಹುದು. PERM ಸಾಮಾನ್ಯವಾಗಿ ಅವುಗಳಲ್ಲಿ ಮೊದಲನೆಯದು. ಕ್ಯೂ ಎಂಬುದು ಉದ್ಯೋಗ ಆಧಾರಿತ ಗ್ರೀನ್-ಕಾರ್ಡ್ ಬ್ಯಾಕ್ಲಾಗ್ ಆಗಿದೆ. ವೃತ್ತಿಪರರು ಪ್ರತಿ ಫಾರ್ಮ್ ಅನ್ನು ಸಲ್ಲಿಸಿದ ನಂತರವೂ ವರ್ಷಗಳು, ಕೆಲವೊಮ್ಮೆ ಒಂದು ದಶಕಕ್ಕೂ ಹೆಚ್ಚು ಕಾಲ ಕಾಯಬೇಕಾಗಬಹುದು.
ಕೆಲವು ಭಾರತೀಯ ಕಂಪನಿಗಳನ್ನು PERMನಿಂದ ಅಮಾನತುಗೊಳಿಸಿರುವುದು ಯಾರ ವೀಸಾವನ್ನೂ ರದ್ದುಗೊಳಿಸುವುದಿಲ್ಲ, ಮತ್ತು ಇದು ಭಾರತೀಯ ಐಟಿ ಸಂಸ್ಥೆಗಳ ಮೇಲೆ ಸಂಪೂರ್ಣ ನಿಷೇಧವಲ್ಲ. ಆದರೆ ಆರನೇ ವರ್ಷವನ್ನು ಸಮೀಪಿಸುತ್ತಿರುವ ಕಾರ್ಮಿಕರಿಗೆ, ಸ್ಥಗಿತಗೊಂಡ ಕಾರ್ಮಿಕ ಪ್ರಮಾಣೀಕರಣವು ಅವರನ್ನು ಅಮೆರಿಕದಲ್ಲೇ ಉಳಿಯಲು ಅನುಮತಿಸುವ ಒಂದು ಮಾರ್ಗವನ್ನು ಸದ್ದಿಲ್ಲದೆ ತೆಗೆದುಹಾಕಬಹುದು. ‘The Print’ ಪತ್ರಿಕೆಯ ಲೇಖನ ದಲ್ಲಿ ಗಮನಿಸಿದಂತೆ, ಬಾಕಿ ಇರುವ ಪ್ರಕರಣದ ಪ್ರತಿಯೊಂದು ನಿರ್ದಿಷ್ಟ ಸ್ಥಿತಿಯ ಪ್ರೊಸೆಸಿಂಗ್ ಅನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದನ್ನು ಆಡಳಿತವು ಸಂಪೂರ್ಣವಾಗಿ ಸ್ಪಷ್ಟಪಡಿಸಿಲ್ಲ.
ಭಾರತೀಯ ಐಟಿ ಸಂಸ್ಥೆಗಳು ತಮ್ಮ H-1B ಅವಲಂಬನೆಯನ್ನು ಕಡಿಮೆ ಮಾಡಿ ಸ್ಥಳೀಯ ನೇಮಕಾತಿಯನ್ನು ವಿಸ್ತರಿಸಿವೆ ಎಂದು NASSCOM ವಾದಿಸುತ್ತದೆ. ಟಿಸಿಎಸ್ ತನ್ನ PERM ಫೈಲಿಂಗ್ಗಳು ಸಿಂಗಲ್ ಡಿಜಿಟ್ ನಲ್ಲಿವೆ ಮತ್ತು ಐದು ವರ್ಷಗಳಲ್ಲಿ ಅಮೆರಿಕದಲ್ಲಿ ಇನ್ನೂ 15,000 ಜನರನ್ನು ನೇಮಿಸಿಕೊಳ್ಳಲು ತಾನು ಯೋಜಿಸಿರುವುದಾಗಿ ಹೇಳುತ್ತದೆ. ದೊಡ್ಡ ಕಂಪನಿಗಳ ದೊಡ್ಡ ಬ್ಯಾಲೆನ್ಸ್ ಶೀಟ್ನ ಪ್ರಮಾಣದಲ್ಲಿ ಇದೆಲ್ಲವೂ ಸರಿ. ಆದರೆ, ಈ ಬೆಳವಣಿಗೆಯಿಂದ ವೈಯಕ್ತಿಕವಾಗಿ ತೊಂದರೆಗೆ ಸಿಲುಕುವವರಿಗೆ - ಮನೆಯ ಅಡಮಾನ ಇರಬಹುದು, ಯುಎಸ್ ಶಾಲೆಯಲ್ಲಿ ಕಲಿಯುತ್ತಿರುವ ಮಗು, ಅವರ ಉದ್ಯೋಗದ ಪರವಾನಗಿಯನ್ನು ಅವಲಂಬಿಸಿರುವ ಸಂಗಾತಿ - ಇವೆಲ್ಲವೂ ಗಂಭೀರ ವಿಚಾರಗಳೇ. ಉತ್ತಮ ಸಂಬಳ ಪಡೆವ, ಹೆಚ್ಚು ಶಿಕ್ಷಣ ಪಡೆದಿರುವ ಮಾದರಿ ವಲಸಿಗ ಎಂದು ಕರೆಯಲ್ಪಡುವವರಿಗೂ ಸಹ ವಲಸೆಗೆ ಸಂಬಂಧಿಸಿದ ಒಂದು ಪಾಲಿಸಿ ಮೆಮೋ ಗಂಭೀರ ಅನಿಶ್ಚಿತತೆಯನ್ನು ಸೃಷ್ಟಿಸಬಲ್ಲದು.
ಪತ್ರಿಕೆಯ ಈ ವರದಿಯನ್ನು ಓದುವಾಗ ವಲಸೆಗೆ ಸಂಬಂಧಿಸಿದ ಒಂದು ಪುಸ್ತಕ ನೆನಪಿಗೆ ಬಂದಿತು.
ಕೆಲವು ತಿಂಗಳ ಹಿಂದೆ ಪ್ರಕಟವಾದ ತನುಲ್ ಠಾಕೂರ್ ಅವರ ‘ವೈಲ್ಡ್ ವೈಲ್ಡ್ ಈಸ್ಟ್’ (Wild Wild East) ಪುಸ್ತಕವು ‘ಬಾಡಿ ಶಾಪ್ಗಳ’ (ದೇಸಿ ಕನ್ಸಲ್ಟನ್ಸಿಗಳು) ಮೂಲಕ ನಡೆಯುವ ವಲಸಿಗರ ಉದ್ಯೋಗ ವ್ಯವಸ್ಥೆಯ ಬಗೆಗೆ ಬೆಳಕು ಚೆಲ್ಲುತ್ತದೆ. ಅಲ್ಲಿ ನಡೆಯುವ ವೇತನ ಶೋಷಣೆಯನ್ನು ದಾಖಲಿಸುತ್ತದೆ. ಮತ್ತು ಇದರಲ್ಲಿ $121.48 ಮಿಲಿಯನ್ಗಿಂತಲೂ ಹೆಚ್ಚು ಮೊತ್ತದ ವೇತನ ಉಲ್ಲಂಘನೆಗಳು ದಾಖಲಾಗಿರುವುದನ್ನು ತಿಳಿಸುತ್ತದೆ. ಈ ಶೋಷಣೆಯ ವ್ಯವಸ್ಥೆಯಲ್ಲಿ ಭಾರತೀಯ ವಲಸೆ ಕಾರ್ಮಿಕರು ಮತ್ತು ಉದ್ಯೋಗ ಕಳೆದುಕೊಂಡ ಅಮೆರಿಕನ್ ಕಾರ್ಮಿಕರಿಬ್ಬರೂ ಸಂತ್ರಸ್ತರಾಗಿದ್ದಾರೆ.
ಹಿಂದೆ ಸ್ವಲ್ಪ ಕಾಲ H-1B ಉದ್ಯೋಗಿಯಾಗಿದ್ದು, ನಂತರದಲ್ಲಿ ಪತ್ರಕರ್ತರಾಗಿ ಪರಿವರ್ತನೆಗೊಂಡ ಠಾಕೂರ್, ಪುಸ್ತಕವನ್ನು ರೂಪಿಸಲು ಎಂಟು ವರ್ಷಗಳನ್ನು ಕಳೆದಿದ್ದಾರೆ. ಅವರು ಪುಸ್ತಕದ ನಿರೂಪಣೆಗಾಗಿ ಮೂವರು ಉದ್ಯೋಗಿಗಳನ್ನು ಅನುಸರಿಸುತ್ತಾರೆ: ಅದರಲ್ಲಿ ಇಬ್ಬರು ಭಾರತೀಯರು, ಕುಮಾರ್ ಪಂಡ್ರುವಾಡ ಮತ್ತು ಮನು ಮಿತ್ರ. ಕನಸನ್ನು ಬೆನ್ನಟ್ಟುತ್ತಾ US ಗೆ ತೆರಳುವ ಭಾರತೀಯರಿವರು. ಮತ್ತೊಬ್ಬರು ಅಮೇರಿಕನ್.
“ಬಾಡಿ ಶಾಪ್” - ಕಾರ್ಮಿಕರನ್ನು ಕರೆತರುವ ಮತ್ತು ನಂತರ ಅವರ ವೇತನದಲ್ಲಿ, ಕೆಲವೊಮ್ಮೆ ವೃತ್ತಿಜೀವನದ ಉದ್ದಕ್ಕೂ, ಕಡಿತವನ್ನು ತೆಗೆದುಕೊಳ್ಳುವ ದೇಸಿ ಸಲಹಾ ಸಂಸ್ಥೆಗಳು. ಈ ವ್ಯವಸ್ಥೆಗಳು ಸಾಮಾನ್ಯವಾಗಿ ಕಾನೂನುಬದ್ಧವಾಗಿ ಕಾಣುತ್ತವೆ. ಆದರೆ ಅವು ಉದ್ಯೋಗದಾತನು ತಮ್ಮನ್ನು ಶೋಷಿಸುವ ಸ್ಥಿತಿಗೆ ಬದ್ಧವಾಗಿರುವ ಕಾರ್ಮಿಕರನ್ನು ಹೊಂದಿರುತ್ತವೆ.
ಠಾಕೂರ್ ಅವರ ವಾದವನ್ನು ಪ್ರಬಲವಾಗಿಸುವುದು ಅದು ಸುಲಭವಾದ ಖಳನಾಯಕನನ್ನು ನಿರಾಕರಿಸುವುದರಲ್ಲಿದೆ. ಜನಾಂಗೀಯತೆಯಿಂದಲೇ H-1B ಬಗ್ಗೆ ವಿರೋಧ ಇದೆ ಎಂಬ ಕಲ್ಪನೆಯನ್ನು ಅವರು ತಿರಸ್ಕರಿಸುತ್ತಾರೆ. ಭಾರತೀಯ ಕೆಲಸಗಾರ ಮತ್ತು ಸ್ಥಳಾಂತರಗೊಂಡ ಅಮೇರಿಕನ್ ಕೆಲಸಗಾರ ಇಲ್ಲಿ ಶತ್ರುಗಳಲ್ಲ; ಅವರಿಬ್ಬರೂ ಒಂದೇ ವ್ಯವಸ್ಥೆಯ ಬಲಿಪಶುಗಳು - ಅಸ್ಪಷ್ಟತೆಯಿಂದ ಲಾಭ ಪಡೆಯುವ ನಿಗಮಗಳು, ಮಧ್ಯವರ್ತಿಗಳು ಮತ್ತು ನಿಯಂತ್ರಕರು ನಿರ್ಮಿಸಿದ ಒಂದು ವ್ಯವಸ್ಥೆಯಿದು ಎಂದು ಅವರು ನಿರೂಪಿಸುತ್ತಾರೆ.
ಅಮೆರಿಕನ್ ರಾಜಕಾರಣಿಗಳು “ಅಮೆರಿಕನ್ ಕಾರ್ಮಿಕರನ್ನು ರಕ್ಷಿಸಿ” ಎಂದು ಹೇಳುವುದನ್ನು ಒಪ್ಪುತ್ತಲೇ, ವ್ಯವಸ್ಥಿತ ನಕಲಿ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಶ್ರಮಜೀವಿ ವಲಸೆ ಕಾರ್ಮಿಕರನ್ನು ಬಲಿಪಶು ಮಾಡುವುದು ಸೂಕ್ತವಲ್ಲ ಮತ್ತು ವಲಸಿಗರೊಂದಿಗೆ ಅವರು ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕು.
ಒಂದು ಸಮಾಜವು ವಲಸಿಗರನ್ನು ‘ನಿರ್ವಹಿಸಬೇಕಾದ ಸಮಸ್ಯೆ’ಯಾಗಿ ಪರಿಗಣಿಸಲು ಪ್ರಾರಂಭಿಸಿದ ನಂತರ, ಒಂದು ಗುಂಪಿಗಾಗಿ ನಿರ್ಮಿಸಿದ ಪರಿಕರಗಳು ಬಹುಬೇಗನೆ ಆ ಗುಂಪಿಗಷ್ಟೇ ಸೀಮಿತವಾಗಿರದೆ ಬೇರೆಡೆಯೂ ಸಾಮಾನ್ಯವಾಗಿಬಿಡುತ್ತವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಆಚೆಗಿನ ವಲಸಿಗರನ್ನು ಮೊದಲ ಟ್ರಂಪ್ ಆಡಳಿತದ ಅವಧಿಯಲ್ಲಿ ನಡೆಸಿಕೊಂಡ ರೀತಿ ಆಘಾತಕರ. ನೆಟ್ಫ್ಲಿಕ್ಸ್ನ ಸಾಕ್ಷ್ಯಚಿತ್ರ ಸರಣಿ ‘ಇಮಿಗ್ರೇಷನ್ ನೇಷನ್’ Immigration Nation (2020) ನಲ್ಲಿ ಆ ಅವಧಿಯಲ್ಲಿ ಸರ್ಕಾರೀ ಏಜೆನ್ಸಿ ICE ಮತ್ತಿತರರು ನಡೆಸಿದ ಅಮಾನುಷ ಕೃತ್ಯಗಳನ್ನು ತೋರಿಸಿಕೊಡುತ್ತದೆ. ಇದು ದಾಳಿಗಳು, ಬಂಧನ ಕೇಂದ್ರಗಳು, ಗಡೀಪಾರು ವಿಮಾನಗಳು, ಗಡಿಯಲ್ಲಿ ಆಶ್ರಯ ಪಡೆಯುವವರು ಮತ್ತು ಬೇರ್ಪಟ್ಟ ಕುಟುಂಬಗಳ ಜನರ ಬಗ್ಗೆ ಅಸಡ್ಡೆ ತೋರುವ ಅಧಿಕಾರಶಾಹಿ ಇವೆಲ್ಲದರ ಬಗ್ಗೆ ಇದೆ.
ವಲಸಿಗರ ರಾಷ್ಟ್ರ, ವಲಸಿಗರ ಬಗ್ಗೆ ಅನುಮಾನ
ಯುನೈಟೆಡ್ ಸ್ಟೇಟ್ಸ್ ತನ್ನನ್ನು ‘ವಲಸಿಗರ ರಾಷ್ಟ್ರ’ ಎಂದು ಬಣ್ಣಿಸಿಕೊಳ್ಳುತ್ತದೆ ಮತ್ತು ಅದು ಬಹುಮಟ್ಟಿಗೆ ನಿಖರವಾದ ವರ್ಣನೆ ಸಹ ಹೌದು. ಅದರ ಕೃಷಿಭೂಮಿಗಳು, ರೈಲುಮಾರ್ಗಗಳು, ಕಾರ್ಖಾನೆಗಳು, ವಿಶ್ವವಿದ್ಯಾಲಯಗಳು ಮತ್ತು ತಂತ್ರಜ್ಞಾನ ಕಂಪನಿಗಳು ಹೊಸಬರಾದ - ಐರಿಶ್, ಜರ್ಮನ್, ಇಟಾಲಿಯನ್, ಚೈನೀಸ್, ಯಹೂದಿ, ಮೆಕ್ಸಿಕನ್ ಮತ್ತು ಈಗ ಭಾರತೀಯ - ಹೀಗೆ ಸತತ ಅಲೆಗಳಿಂದ ನಿರ್ಮಿಸಲ್ಪಟ್ಟವು. ಆಯಾಯ ಸಮಯದಲ್ಲಿ, ಪ್ರತಿಯೊಂದು ಅಲೆಯನ್ನು ಅನುಮಾನದಿಂದ ನೋಡಲಾಗುತ್ತಿತ್ತು. 1882 ರ ಚೀನೀ ಹೊರಗಿಡುವ ಕಾಯಿದೆಯು ಸಂಪೂರ್ಣವಾಗಿ ಒಂದು ರಾಷ್ಟ್ರದ ಜನತೆಯನ್ನು ನಿಷೇಧಿಸಿತು. 1924 ರ ವಲಸೆ ಕಾಯಿದೆಯು ದಕ್ಷಿಣ ಮತ್ತು ಪೂರ್ವ ಯುರೋಪಿಯನ್ನರು ಮತ್ತು ಏಷ್ಯನ್ನರನ್ನು ಹೊರಗಿಡಲು ವಿನ್ಯಾಸಗೊಳಿಸಲಾದ ಕೋಟಾಗಳನ್ನು ವಿಧಿಸಿತು. ಏಷ್ಯಾಟಿಕ್ ಬಾರ್ ಡ್ ಝೋನ್ ಏಷ್ಯಾದ ಹೆಚ್ಚಿನ ಭಾಗವನ್ನು ಮುಚ್ಚಿತು, ಅದರಲ್ಲಿ ಭಾರತವೂ ಸೇರಿತ್ತು. 1965 ರಲ್ಲಿ ಮಾತ್ರ Hart-Celler ಕಾಯಿದೆಯು ಆಧುನಿಕ ಭಾರತೀಯ-ಅಮೇರಿಕನ್ ಸಮುದಾಯವನ್ನು ಸಾಧ್ಯವಾಗಿಸುವ ಬಾಗಿಲು ತೆರೆಯಿತು.
ಗಡಿಗಳು ಅಸ್ತಿತ್ವದಲ್ಲಿರಬಾರದು ಅಥವಾ ದೇಶಗಳಿಗೆ ವಲಸೆ ನಿಯಮಗಳನ್ನು ಹೊಂದಿಸುವ ಹಕ್ಕಿಲ್ಲ ಎಂಬುದು ಲೇಖನದ ವಾದವಲ್ಲ. ಠಾಕೂರ್ ಅವರ ಪುಸ್ತಕವು ನಿಜವಾದ ದೌರ್ಜನ್ಯ ಅಸ್ತಿತ್ವದಲ್ಲಿದೆ ಮತ್ತು ಅಮೇರಿಕನ್ ಕಾರ್ಮಿಕರಿಗೆ ನಿಜವಾದ ಕುಂದುಕೊರತೆಗಳಿವೆ ಎಂಬುದನ್ನು ನೆನಪಿಸುತ್ತದೆ. ಆದರೆ ಪರಿಶೀಲನೆಗೆ ಒಳಪಡದ ವ್ಯವಸ್ಥೆಗಳು ಅದರ ಭಾಗವಾಗಿರುವ ಎಲ್ಲರಿಗೂ ಹಾನಿ ಮಾಡಬಹುದು.
ಒಂದು ದೇಶವು ಆ ದೌರ್ಜನ್ಯಗಳನ್ನು ಹೇಗೆ ಸರಿಪಡಿಸುತ್ತದೆ ಎಂಬುದು ಅದರ ಮೌಲ್ಯಗಳನ್ನು ಬಹಿರಂಗಪಡಿಸುತ್ತದೆ. ಉನ್ನತ ಸ್ಥಾನವನ್ನು ತಲುಪುವ ವಲಸಿಗನನ್ನು ಗೌರವಿಸಲು ಅಮೆರಿಕ ಸಂತೋಷಪಡುತ್ತದೆ. ಇನ್ನೂ ಕೆಳ ಹಂತದಲ್ಲಿರುವ ಸಾವಿರಾರು ಜನರೊಂದಿಗೆ ಅದು ತುಂಬಾ ಕಡಿಮೆ ತಾಳ್ಮೆಯಿಂದಿರುತ್ತದೆ. ಇಂತಹ ವಲಸಿಗರ ಬಗ್ಗೆ ಅಮೆರಿಕದ ಅಧ್ಯಕ್ಷ-ಉಪಾಧ್ಯಕ್ಷರು ಬಳಸಿರುವ ಪದಗುಚ್ಛಗಳು ಸಹ ಅಸಭ್ಯವಾಗಿವೆ. ವಲಸಿಗರಿಂದ ನಿರ್ಮಿಸಲ್ಪಟ್ಟ ರಾಷ್ಟ್ರವು ಪ್ರತಿಯೊಬ್ಬ ಹೊಸಬರಿಗೂ ಒಂದು ಸ್ಥಾನವನ್ನು ನೀಡಬೇಕಾಗಿಲ್ಲ. ಆದರೆ ಅದು ಅವರಿಂದ ಏನು ಬಯಸುತ್ತದೆ, ಅದು ಅವರಿಗೆ ಏನು ಭರವಸೆ ನೀಡುತ್ತದೆ ಮತ್ತು ಆ ಭರವಸೆಗಳು ತನಗೆ ಅನಾನುಕೂಲವಾದಾಗ ಅದು ಏನು ಮಾಡಲು ಸಿದ್ಧವಾಗಿರುತ್ತದೆ ಎಂಬುದರ ಬಗ್ಗೆ ಪ್ರಾಮಾಣಿಕತೆಯನ್ನು ತೋರಬೇಕಿದೆ. ವ್ಯಾವಹಾರಿಕ ಮತ್ತು ಲಾಭ-ನಿರ್ದೇಶಿತ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಅನ್ವರ್ಥವಾಗುತ್ತ ಸಾಗಿರುವ ಅಮೆರಿಕದಲ್ಲಿ ವಲಸಿಗರು ಇನ್ನಿತರ ವಸ್ತುಗಳಂತೆ ‘ಬಳಸಿ ಬಿಸಾಡುವ’ (use and throw) ವಸ್ತುಗಳಾಗುತ್ತಿದ್ದರೆ ಆಶ್ಚರ್ಯವಾಗದಿದ್ದರೂ ವಿಷಾದವಂತೂ ಆಗುತ್ತದೆ.

