ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದ ದುಷ್ಪರಿಣಾಮಗಳ ಮೇಲೆ ಸಾರ್ವಜನಿಕ ಚರ್ಚೆಗಳು ಕೇಂದ್ರಿತವಾಗಿರುತ್ತವೆ. ಪ್ರೊಫೆಸರ್ ದೇವಿ ಶ್ರೀಧರ್ ಅವರ Even without social media, phones have a subtle, damaging effect on our mental health ಎಂಬ ಲೇಖನದಲ್ಲಿ ಡಿಜಿಟಲ್ ಸಂವಹನದ ಮೂಲಭೂತ ರೂಪಗಳಾದ ಇಮೇಲ್ಗಳು, ಪಠ್ಯಗಳು ಮತ್ತು ಸಂದೇಶ ಕಳುಹಿಸುವ ಅಪ್ಲಿಕೇಶನ್ಗಳು ಸಹ ನಮ್ಮ ಮಾನಸಿಕ ಆರೋಗ್ಯದ ಮೇಲೆ ಮಿತಿಮೀರುವಷ್ಟು ಪರಿಣಾಮ ಬೀರುತ್ತಿವೆ ಎಂದು ಬರೆಯುತ್ತಾರೆ.
ನಮ್ಮ ಮಿದುಳುಗಳು ತ್ವರಿತ, ವರ್ಚುವಲ್ ಸಂವಹನದ ಪ್ರಪಂಚಕ್ಕಾಗಿ ವಿನ್ಯಾಸಗೊಳಿಸಲ್ಪಟ್ಟಿಲ್ಲ. ಮಾನವ ಇತಿಹಾಸದ ಬಹುಪಾಲು ಕಾಲ, ಸಾಮಾಜಿಕ ಸಂವಹನವು 150 ಕ್ಕಿಂತ ಹೆಚ್ಚಿರದ ಜನರ ಸಣ್ಣ, ಸ್ಥಿರ ಗುಂಪುಗಳಲ್ಲಷ್ಟೆ ನಡೆದಿದೆ. ಇಂತಹ ಸೆಟ್ಟಿಂಗ್ಗಳಲ್ಲಿ, ಅರ್ಥವನ್ನು ಗ್ರಹಿಸಲು ನಾವು ಮುಖದ ಅಭಿವ್ಯಕ್ತಿಗಳು, ಧ್ವನಿ ಮತ್ತು ದೇಹ ಭಾಷೆಯಂತಹ ಮೌಖಿಕ ಸೂಚನೆಗಳನ್ನು ಅವಲಂಬಿಸುತ್ತಿದ್ದೆವು.
ಡಿಜಿಟಲ್ ಸಂದೇಶಗಳು ಈ ಸೂಕ್ಷ್ಮ ವ್ಯತ್ಯಾಸಗಳನ್ನು ತೆಗೆದುಹಾಕುತ್ತವೆ. ಚಿಕ್ಕದಾದ, ಬರಿದೆ ಪಠ್ಯ-ಆಧಾರಿತ ಸಂವಹನಕ್ಕೆ ಬದಲಾದಾಗ, ಸಂದೇಶಗಳು ತಪ್ಪಾದ ವ್ಯಾಖ್ಯಾನಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಮತ್ತು ಈ ಸಂದೇಶಗಳು ಮಾನವನ ಮೆದುಳಿಗೆ ಅಂತರ್ಗತವಾಗಿ ಹೆಚ್ಚು ಒತ್ತಡವನ್ನು ನೀಡುತ್ತವೆ. ಟೆಲಿಫೋನಿನಲ್ಲಿ ಮಾತನಾಡುವುದು ಮತ್ತು ಟೆಕ್ಸ್ಟ್ ಸಂದೇಶ ಇವೆರಡರ ಕುರಿತು ಕೆಲವು ವರ್ಷಗಳ ಹಿಂದೆ ಓದಿದ್ದ ಲಘು ಧಾಟಿಯ ಒಂದು ಲೇಖನ (The Death of the Telephone Call) ಇಲ್ಲಿ ನೆನಪಾಯಿತು.
ದೇವಿ ಶ್ರೀಧರ್ ಬರೆಯುತ್ತಾರೆ-
2022 ರ ಒಂದು ಅಧ್ಯಯನವು ಸಂವಹನ ಕ್ರಮದ ಅಸಮಾನತೆಯನ್ನು ಎತ್ತಿ ತೋರಿಸಿದೆ. 2026 ರಲ್ಲಿ ಸಂಬಂಧಪಟ್ಟ ವಿವಿಧ ಅಧ್ಯಯನಗಳ ವಿಮರ್ಶೆಯಲ್ಲೂ ಪಠ್ಯ ಸಂದೇಶಗಳನ್ನು ಕಳಿಸುವುದು ನಕಾರಾತ್ಮಕ ಭಾವನೆಗಳು ಹೆಚ್ಚಾಗುವುದಕ್ಕೂ ಮತ್ತು ಖುದ್ದು ಭೇಟಿಯಾಗುವುದು ಸಕಾರಾತ್ಮಕ ಭಾವನೆಗಳು ಹೆಚ್ಚಾಗುವುದಕ್ಕೂ ಕಾರಣವಾಗುವುದು ಕಂಡುಬಂದಿದೆ.
ಡಿಜಿಟಲ್ ಯುಗದ ಮತ್ತು ಪೋನಿನ ಇನ್ನೊಂದು ಪರಿಣಾಮವೆಂದರೆ ನಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವಿನ ಗಡಿಯು ಪರಿಣಾಮಕಾರಿಯಾಗಿ ಕಣ್ಮರೆಯಾಗಿರುವುದು. ಪ್ರತಿಕ್ರಿಯೆಗಳನ್ನು ಈಗ ಸಾಮಾನ್ಯವಾಗಿ ನಿಮಿಷಗಳಲ್ಲಿ ನಿರೀಕ್ಷಿಸಲಾಗುತ್ತದೆ. ಇದು ಸಂಜೆಗಳಿಗೂ ಮತ್ತು ವಾರಾಂತ್ಯಗಳಿಗೂ ಮುಂದುವರಿಯುತ್ತಾ ಒಂದು “ಯಾವಾಗಲೂ ಆನ್” ಆಗಿರುವ ಸ್ಥಿತಿಯನ್ನು ರಚಿಸುತ್ತದೆ. ಈ ನಿರಂತರ ಲಭ್ಯತೆಯು ಮೆದುಳಿನ ಮೇಲೂ ಪ್ರಭಾವ ಉಂಟು ಮಾಡುತ್ತದೆ. ‘ಈಗಲೇ ಉತ್ತರಿಸಬೇಕೇ? ಕಾಯಬಹುದೇ? ಉತ್ತರಿಸದಿದ್ದರೆ rude ಆಗಿ ಕಾಣುತ್ತದೆಯೇ?’ ಹೀಗೆ ಮೆದುಳು ಸಣ್ಣ ಸಣ್ಣ ನಿರ್ಧಾರಗಳ ಸುಳಿಗೆ ಸಿಲುಕುತ್ತದೆ. Cognitive fatigue ಎಂದು ಕರೆಯಲ್ಪಡುವ ಈ ವಿದ್ಯಮಾನವು ಅಂತಿಮವಾಗಿ ಸಂಪೂರ್ಣ ಭಾವನಾತ್ಮಕ ಬಳಲಿಕೆಗೆ ಕಾರಣವಾಗುತ್ತದೆ.
ಕಡೆಯಲ್ಲಿ ಹೀಗೆ ಬರೆಯುತ್ತಾರೆ-
ಆಧುನಿಕ ಯುಗದಲ್ಲಿ, ನಾವು ಹಿಂದೆಂದಿಗಿಂತಲೂ ಹೆಚ್ಚು ಸಂಪರ್ಕ ಹೊಂದಿದ್ದೇವೆ, ಆದರೂ ಬರ್ನ್ ಔಟ್, ಬಳಲಿಕೆ ಮತ್ತು ಒಂಟಿತನ ಇವೆಲ್ಲವೂ ಜಾಗತಿಕವಾಗಿ ಏರುತ್ತಲೇ ಇವೆ. ಇತಿಹಾಸದ ಯಾವುದೇ ಹಂತಕ್ಕಿಂತ ಇಂದು ನಾವು ಹೆಚ್ಚಿನ ಸಂಪರ್ಕದಲ್ಲಿದ್ದರೂ ಹಿಂದೆಂದಿಗಿಂತಲೂ ಹೆಚ್ಚಿನ ಪ್ರತ್ಯೇಕತೆಯನ್ನು ಅನುಭವಿಸುತ್ತಿದ್ದೇವೆ.
