
ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವಂತೆಯೇ ಏಪ್ರಿಲ್ 16, 2026 ರಂದು, ಭಾರತ ಸರ್ಕಾರವು ತರಾತುರಿಯಲ್ಲಿ ಲೋಕಸಭೆಯ ವಿಶೇಷ ಅಧಿವೇಶನವನ್ನು ಕರೆದು ಪ್ರಮುಖ ಮೂರು ಶಾಸನಗಳ ಒಂದು ಪ್ಯಾಕೇಜ್ ಅನ್ನು ಪರಿಚಯಿಸಿತು. ಸಂವಿಧಾನ (131 ನೇ ತಿದ್ದುಪಡಿ) ಮಸೂದೆ, 2026, ಡಿಲಿಮಿಟೇಶನ್ ಬಿಲ್, 2026, ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ, 2026.
ಲೋಕಸಭಾ ಸ್ಥಾನಗಳನ್ನು 50% ರಷ್ಟು ಹೆಚ್ಚಿಸುವುದು, 2011 ರ ಜನಗಣತಿ ಆಧರಿಸಿದ ತಕ್ಷಣದ ಮಹಿಳಾ ಮೀಸಲಾತಿ, ಮತ್ತು ಡಿಲಿಮಿಟೇಶನ್ ಮತ್ತು ಕ್ಷೇತ್ರಗಳ ಪುನರ್ರಚನೆಗಾಗಿ ಡಿಲಿಮಿಟೇಶನ್ ಕಮಿಶನ್ ಅನ್ನು ಸ್ಥಾಪಿಸುವುದು ಇವು ಈ ಪ್ಯಾಕೇಜ್ ನ ಘೋಷಿತ ಉದ್ದೇಶಗಳಾಗಿದ್ದವು. ವಿರೋಧ ಪಕ್ಷಗಳಿಂದ ಹಲವು ಆಯಾಮಗಳಲ್ಲಿ, ವಿಶೇಷವಾಗಿ ರಾಜ್ಯಗಳ ನಡುವೆ ಸೀಟು ಅನುಪಾತದ ಮೇಲಿನ ಪರಿಣಾಮಗಳ ಬಗ್ಗೆ ಸರ್ಕಾರವು ಗಮನಾರ್ಹ ವಿರೋಧವನ್ನು ಎದುರಿಸಿತು. ಮತ್ತು ಮಸೂದೆಗೆ ಸೋಲಾಯಿತು.
ಈ ವಿಚಾರವಾಗಿ ಸಾಕಷ್ಟು ಚರ್ಚೆಯಾಗುತ್ತಿದೆ. ಸ್ವತಂತ್ರ ಮಾಧ್ಯಮ ವೇದಿಕೆಯಾದ ನ್ಯೂಸ್ ಲಾಂಡ್ರಿ ಯಲ್ಲಿ ತಾರಾ ಕೃಷ್ಣಸ್ವಾಮಿ ಅವರು Why this delimitation is suspicious and it’s not what you think ಎಂಬ ಲೇಖನದಲ್ಲಿ ಡಿಲಿಮಿಟೇಶನ್ಗೆ ಸಂಬಂಧಿಸಿದ ಸ್ಪಷ್ಟತೆಯ ಕೊರತೆಯನ್ನು ಗುರುತಿಸುತ್ತಾರೆ. ಮತ್ತು ಭಾರತದ ರಾಜಕೀಯ ವಾಸ್ತುಶಿಲ್ಪದ ಅತಿದೊಡ್ಡ ಬದಲಾವಣೆಯನ್ನು ಅತಿ ಕಡಿಮೆ ಪರಾಮರ್ಶೆಗೆ ಒಳಪಡಿಸುವ ಮೂಲಕ ಸಾಧಿಸುವ ಉದ್ದೇಶಪೂರ್ವಕವಾದ ಉಪಾಯ ಎಂದು ನಿರೂಪಿಸುತ್ತಾರೆ. ಇಂತಹ ತಂತ್ರಗಳು ಪ್ರಜಾಪ್ರಭುತ್ವದ ರೂಢಿಗಳನ್ನು ಬದಿಗೆ ಸರಿಸುತ್ತವೆ. ಪಾರದರ್ಶಕವಾದ, ಸಾಂಸ್ಥಿಕ ಕಾರ್ಯವಿಧಾನದ ಬದಲು ಅಸ್ಪಷ್ಟವಾದ ಮತ್ತು ಮೌಖಿಕವಾದ ಭರವಸೆಗಳ ಮೂಲಕ ಶಾಸನಗಳನ್ನು ಜಾರಿಗೆ ತರುವ ಪ್ರಯತ್ನಗಳು ಕಾನೂನು ತೂಕವನ್ನೂ ಹೊಂದಿರುವುದಿಲ್ಲ. ಇದು ಪ್ರಜಾಪ್ರಭುತ್ವದ ರೂಢಿಗಳನ್ನು ಶಾರ್ಟ್-ಸರ್ಕ್ಯೂಟ್ ಮಾಡುವ ಪ್ರಯತ್ನ.
ಗೊಂದಲಗೊಳಿಸುವ ಅಂಶಗಳು
ಸರ್ಕಾರದ ಕಾರ್ಯತಂತ್ರವು ಉದ್ದೇಶಪೂರ್ವಕವಾಗಿ ಸದನದ ಶಿಷ್ಟಾಚಾರದ ಅವಗಣನೆಯಂತಿದೆ. ಅದಕ್ಕೆ ಪ್ರತಿಯಾಗಿ ನಿರೀಕ್ಷಿಸಬಹುದಾದಂತೆ ವಿರೋಧಪಕ್ಷಗಳ ಸದಸ್ಯರ ಪ್ರತಿಕ್ರಿಯೆಯೂ ಸಭಾಗೌರವದ ಎಲ್ಲೆಯನ್ನು ಪರೀಕ್ಷಿಸುವಂತೆ ಇತ್ತು.
ತಾರಾ ಕೃಷ್ಣಸ್ವಾಮಿಯವರು ಲೇಖನದಲ್ಲಿ ಈ ಮುಂತಾದ ಅಂಶಗಳನ್ನು ಗುರುತಿಸಿದ್ದಾರೆ:
ಪಠ್ಯ ಮತ್ತು ಮಾತಿನ ನಡುವಿನ ವಿರೋಧಾಭಾಸ: ಎಲ್ಲಾ ರಾಜ್ಯಗಳಾದ್ಯಂತ ಸೀಟುಗಳಲ್ಲಿ 50% “ಅನುಪಾತದ ಹೆಚ್ಚಳ” ವನ್ನು ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರು ಮೌಖಿಕವಾಗಿ ಖಾತರಿಪಡಿಸಿದ್ದಾರೆ. ಡಿಲಿಮಿಟೇಶನ್ ಬಿಲ್ ನ ಪಠ್ಯದಲ್ಲಿ ಇತ್ತೀಚಿನ ಜನಗಣತಿ ಅಂಕಿಅಂಶಗಳನ್ನು ಬಳಸಿಕೊಂಡು ಅನುಪಾತದ ಹೆಚ್ಚಳ ಮಾಡುವುದೆಂದು ನಮೂದಿಸಲಾಗಿದೆ. ಶಾಸಕಾಂಗ ಸನ್ನಿವೇಶದಲ್ಲಿ, ಮೌಖಿಕ ಹೇಳಿಕೆಗಳು ಕಾನೂನುಬದ್ಧವಾಗಿ ಅಪ್ರಸ್ತುತವಾಗುತ್ತವೆ; ಮಸೂದೆಯ ಪಠ್ಯ ಮಾತ್ರ ಮುಖ್ಯವಾಗುತ್ತದೆ.
ಹಿಡನ್ ಫಾರ್ಮುಲಾಗಳು: ಡಿಲಿಮಿಟೇಶನ್ ಮೂಲಕ ರಾಜ್ಯಗಳಿಗೆ ಸೀಟುಗಳನ್ನು ಹೇಗೆ ಹಂಚಲಾಗುತ್ತದೆ ಎಂಬುದಕ್ಕೆ ನಿರ್ದಿಷ್ಟ ಸೂತ್ರವನ್ನು ಪ್ರಕಟಿಸಲು ಸರ್ಕಾರ ವಿಫಲವಾಗಿದೆ, ಡಿಲಿಮಿಟೇಶನ್ ಆಯೋಗಕ್ಕೆ ನಿರ್ಧಾರವನ್ನು ಬಿಟ್ಟಿದೆ, ಮತ್ತು ಕಮಿಶನ್ ನ ಆದೇಶಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಿಲ್ಲ ಎಂದು ನಮೂದಿಸಿದೆ.
ಪ್ರಜಾಪ್ರಭುತ್ವದ ರೂಢಿಗಳು: ಪ್ರಜಾಪ್ರಭುತ್ವದಲ್ಲಿ ಕೇವಲ ಫಲಿತಾಂಶ ಅಷ್ಟೇ ಅಲ್ಲ ಕಾರ್ಯವಿಧಾನವೂ ಮುಖ್ಯವಾಗುತ್ತದೆ. ಸಂವಿಧಾನದತ್ತವಾದ ಸಾಂಸ್ಥಿಕ ಕಾರ್ಯವಿಧಾನಗಳಷ್ಟೇ ನಮ್ಮ ಸ್ವಾತಂತ್ರ್ಯವನ್ನು ಕಾಯಬಲ್ಲವು. ಸರ್ಕಾರಗಳು ಬದಲಾಗುತ್ತವೆ. ಗಣರಾಜ್ಯವನ್ನು ಕಾಯಬೇಕಾದವರು ಜನಗಳೇ. ಸಂವಿಧಾನಕ್ಕೆ ತಿದ್ದುಪಡಿ ತರಲು ಸಂವಿಧಾನ ವಿಧಿಸಿರುವ ಕಾರ್ಯವಿಧಾನ ಸಹ ರಾಜಕೀಯ ಅಧಿಕಾರದ ಆಟಗಳ ವಿರುದ್ಧ ರಕ್ಷಣೆ ಒದಗಿಸಲಿಕ್ಕಾಗಿಯೇ ನಿಗದಿಯಾಗಿದೆ.
ಸಂವಿಧಾನ ತಿದ್ದುಪಡಿಯಂತಹ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ವಿಸ್ತಾರವಾದ ಚರ್ಚೆ, ಸಂಧಾನ ಅತ್ಯಗತ್ಯ. ಯಾವುದೇ ಮಹತ್ವದ ಮಸೂದೆಯ ಅನುಮೋದನೆಗೂ ಸಹ ಅಧ್ಯಯನ, ಸಾರ್ವಜನಿಕ ಚರ್ಚೆ, ತಜ್ಞರ ಮತ್ತು ಆಯ್ಕೆ ಸಮಿತಿಗಳ ಮೂಲಕ ವಿಶ್ಲೇಷಣೆ, ಸದನದಲ್ಲಿ ಚರ್ಚೆ ಮತ್ತು ಅಂತಿಮವಾಗಿ ಸದನ ಸದಸ್ಯರ ಮತಕ್ಕೆ ಹಾಕುವುದು - ಇದು ಸಮರ್ಪಕವಾದ ಕಾರ್ಯವಿಧಾನ. ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಅಗತ್ಯವಾದ ಪ್ರಕ್ರಿಯೆಗಳನ್ನು ಬೈಪಾಸ್ ಮಾಡಲಾಗದು. ಆದರೆ ಈ ಮಸೂದೆಯ ವಿಶ್ಲೇಷಣೆ ಮತ್ತು ಚರ್ಚೆಯ ಸಮಯವನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲು ವಿಶೇಷ ಅಧಿವೇಶನಕ್ಕೆ ಕೇವಲ 48 ಗಂಟೆಗಳ ಮೊದಲು ಬಿಲ್ಗಳನ್ನು ಸದಸ್ಯರುಗಳೊಂದಿಗೆ ಹಂಚಿಕೊಳ್ಳಲಾಯಿತು.